ಮಂಡ್ಯ: ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿ ನಾಳೆ (ಜುಲೈ 29) ನಗರದಲ್ಲಿ ಬಂದ್ ಮಾಡುವುದಾಗಿ ಕಾವೇರಿ ಕೆಆರ್ಎಸ್ ಉಳುವಿಗಾಗಿ ಜನಾಂದೋಲನ ಸಮಿತಿ ತಿಳಿಸಿದೆ.
ಬಂದ್ಗೆ ರೈತಾ ಸಂಘ, ಕರುನಾಡ ಸೇವಾಕರ ಸಂಘಟನೆ, ಆಟೋ ಡ್ರೈವರ್ಸ್ಅಸೋಸಿಯೇಷನ್, ಜಯ ಕರ್ನಾಟಕ, ಭಾರತೀಯ ಸಂವಿಧಾನ ಹಿತರಕ್ಷಣ ವೇದಿಕೆ, ಕಬ್ಬು ಬೆಳೆಗಾರರ ಸಂಘ, ಒಕ್ಕಲಿಗರ ಸೇವಾ ಟ್ರಸ್ಟ್ ಮತ್ತು ದಲಿತಾ ಸಂಘರ್ಷ ಸಮಿತಿ (ಕೃಷ್ಣಪ್ಪ) ಬೆಂಬಲ ನೀಡಿವೆ. ಈ ಬಂದ್ನಿಂದ ಬೆಂಗಳೂರು ಮೈಸೂರು ನಡುವಿನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೆಆರ್ಎಸ್ ಸುತ್ತಮುತ್ತ ಕೆಲವು ಸ್ಥಳೀಯ ರಾಜಕಾರಣಿಗಳು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಅಣೆಕಟ್ಟಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು. ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿಯ ವರದಿಯ ಜೊತೆಗೆ ಸ್ಥಳೀಯ ರೈತರ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಣೆಕಟ್ಟಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಕಳೆದ 2019ರ ಅಕ್ಟೋಬರ್ನಲ್ಲಿ ಆದೇಶ ಹೊರಡಿಸಿದ್ದರು.
ಆ ಆದೇಶದ ಮೇರೆಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸುತ್ತಮುತ್ತ ನಡೆಯುತ್ತಿದ್ದ ಎಲ್ಲಾ ಗಣಿಗಾರಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದರು.
ಆದರೂ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅದನ್ನು ತಕ್ಷಣದಿಲ್ಲದೇ ನಿಲ್ಲಿಸಬೇಕು ಈ ಮೂಲಕ ಲಕ್ಷಾಂತರ ಎಕರೆಗೆ ನೀರುಣಿಸಿ ಲಕ್ಷಾಂತರ ರೈತರ ಮತ್ತು ಬೆಂಗಳೂರಿನ ಕೋಟ್ಯಂತರ ಮಂದಿಗೆ ನೀರು ಕೊಡುತ್ತಿರುವ ಡ್ಯಾಂ ಅನ್ನು ಕಾಪಾಡಬೇಕು ಎಂದು ಒತ್ತಾಯಿಸಿ ನಾಳೆ ಬಂದ್ ಮಾಡಲಾಗುತ್ತಿದ್ದು ಜಿಲ್ಲೆಯ ಸಮಸ್ತ ವ್ಯಾಪಾರಿಗಳು ಸೇರಿ ನಾಗರಿಕರು ಬಂದ್ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.