ಮಂಗಳೂರು: ಭಾರಿ ಮಳೆಯಿಂದ ಗುರುಪುರದ ಬಂಗ್ಲೆಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮಗೊಂಡಿದ್ದು, ಮಣ್ಣಿನಡಿ ಇಬ್ಬರು ಮಕ್ಕಳು ಸಿಲುಕಿರುವ ಘಟನೆ ನಡೆದಿದೆ.
ಇಂದು ಮುಂಜಾನೆಯಿಂದ ಸುರಿದ ಮಳೆಗೆ ಗುಡ್ಡ ಕುಸಿದಿದ್ದರಿಂದ ಮನಗಳು ನೆಲಕ್ಕುರುಳಿವೆ. ಇದರಿಂದ ಮನೆಯಲ್ಲಿದ್ದ ಇಬ್ಬರು ಮಕ್ಕಳು ಅದೇ ಮಣ್ಣಿನಡಿ ಸಿಲುಕಿದ್ದು, ಆ ಮಕ್ಕಳ ರಕ್ಷಣೆ ಕಾರ್ಯದಲ್ಲಿ ಎನ್ಡಿಆರ್ಎಫ್ ತಂಡ ತೊಡಗಿದೆ.
ಈ ಮಕ್ಕಳ ಮೇಲೆ 30 ಅಡಿಯಷು ಮಣ್ಣುಬಿದ್ದಿದೆ ಎಂದು ಹೇಳಲಾಗುತ್ತಿದೆ. 4ವರ್ಷದ ಮಗು ಸೇರಿ ಇಬ್ಬರು ಮಕ್ಕಳು ಸಿಲುಕಿದ್ದು, ಮಧ್ಯಾಹ್ನ ಸುಮಾರು 12.30ರಲ್ಲಿ ಘಟನೆ ನಡೆದಿದೆ. ಆದರೆ ಈವರೆಗೂ (3.40 ಗಂಟೆ) ಮಕ್ಕಳ ಸುಳಿವು ಸಿಕ್ಕಿಲ್ಲ.
ಇನ್ನು ಇದರಿಂದ ಪಾಲಕರು ಕಂಗಾಲಾಗಿದ್ದಾರೆ. ಈ ನಡುವೆ ರಕ್ಷಣ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ ತಂಡ, ಪೊಲೀಸರು ಜೆಸಿಬಿ ಮೂಲಕ ರಕ್ಷಣ ಕೆಲಸವನ್ನು ಚುರುಕುಗೊಳಿಸಿದ್ದಾರೆ.