ಬನ್ನೂರು: ಸ್ನೇಹ ಜೀವಿ ಎಲ್ಲರೊಂದಿಗೂ ಸ್ನೇಹಮಹಿಯಾಗಿದ್ದ ಮಂಜುನಾಥ ಪಟೇಲ್ (31) ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿ, ಬೀಡನಹಳ್ಳಿ ಗ್ರಾಮದ ನಿವಾಸಿ, ಬೀಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ನಾಗರಾಜ್ ಅವರ ಪುತ್ರ ಮಂಜುನಾಥ್ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳಿದ್ದಾರೆ.
ಮಂಜುನಾಥ್ ಪಾರ್ಥಿವ ಶರೀರವನ್ನು ಸ್ವಗ್ರಾಮ ಬೀಡನಹಳ್ಳಿಯ ಪಟೇಲ್ ನಾಗರಾಜು ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಂಗಳವಾರ ಮಧ್ಯಾಹ್ನದ ನಂತರ ಅವರ ತೆಂಗಿನ ತೋಟದಲ್ಲಿ ಅಂತಿಮ ಕ್ರಿಯೆ ನೆರವೇರಿಸಲಾಯಿತು.
ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿಯಾಗಿದ್ದ ಮಂಜುನಾಥ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಗಳು ಸುಖ ಜೀವನ ನಡೆಸುವ ಮುನ್ನವೇ ವಿಧಿ ಅವರ ಜೀವನದಲ್ಲಿ ಆಟವಾಡಿರುವುದು ತುಂಬ ನೋವು ತರಿಸಿದೆ. ಪತ್ನಿ, ತಂದೆ ನಾಗರಾಜು, ತಾಯಿ, ಸಹೋದರಿ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಂಜುನಾಥ್ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.