ನ್ಯೂಡೆಲ್ಲಿ: ರಾಷ್ಟ್ರ ರಾಜಧಾನಿ ನ್ಯೂಡೆಲ್ಲಿಯಲ್ಲಿ 14 ವರ್ಷಗಳಲ್ಲೇ ಮೊದಲ ಬಾರಿಗೆ ಈ ತಿಂಗಳಿನಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಇಲ್ಲಿನ ಜನರು ಚಳಿ ತಾಳಲಾರದೆ ಬೆಚ್ಚನೆಯ ಹೊದಿಕೆ ಮತ್ತು ಬೆಂಕಿಗೆ ಒಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ಬೆಳಗ್ಗೆ ನ್ಯೂಡೆಲ್ಲಿಯಲ್ಲಿ 7.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 14 ವರ್ಷಗಳ ಬಳಿಕ ದಾಖಲಾದ ಅತೀ ಕಡಿಮೆ ಉಷ್ಣಾಂಶದ ಪ್ರಮಾಣ ಎಂದು ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದು ಬಂದಿದೆ. ಇದು ಇನ್ನೂ ಎರಡು ದಿನ ಮುಂದುವರಿಯಲಿದ್ದು ಜನರು ಮೆಚ್ಚನೆಯ ಉಡುಪುಗಳನ್ನು ಧರಿಸುವಂತೆಯೂ ಹವಾಮಾನ ಇಲಾಖೆ ಸಲಹೆ ನೀಡಿದೆ.
ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಭಾರತೀಯ ಹವಾಮಾನ ಇಲಾಖೆಯು ಎ ಕೋಲ್ಡ್ ವೇವ್ನ್ನು ಘೋಷಿಸುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಕಳೆದ 14 ವರ್ಷಗಳ ಬಳಿಕ ನ್ಯೂಡೆಲ್ಲಿಯಲ್ಲಿ ಈ ವರ್ಷದ ನವೆಂಬರ್ ತಿಂಗಳಲ್ಲಿ ದಾಖಲಾಗಿರುವ 7.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವು ಅತ್ಯಂತ ಕಡಿಮೆ ತಾಪಮಾನವಾಗಿದೆ. ಇಲ್ಲಿ ಕಳೆದ ವರ್ಷ ಕನಿಷ್ಠ 11.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಹಾಗೂ ಸಾಮಾನ್ಯ ಉಷ್ಣಾಂಶಕ್ಕಿಂತ ಅತೀ ಕಡಿಮೆ ಉಷ್ಣಾಂಶ ನ್ಯೂಡೆಲ್ಲಿಯಲ್ಲಿ ದಾಖಲಾಗಿದ್ದರಿಂದ ನಗರದಲ್ಲಿ ಶೀತದ ಅಲೆಗಳು ಏಳುತ್ತಿವೆ ಎಂದು ಖಾಸಗಿ ಹವಾಮಾನ ಇಲಾಖೆ ಸ್ಕೈಮೆಟ್ ವೆದರ್ ತಜ್ಞ ಮಹೇಶ್ ಪಲಾವತ್ ತಿಳಿಸಿದ್ದಾರೆ.
ಹಿಮದಿಂದ ಕೂಡಿದ ತಂಪಾದ ಗಾಳಿ ಪಶ್ಚಿಮ ಹಿಮಾಲಯದಿಂದ ಬೀಸುತ್ತಿರುವುದರಿಂದ ನ್ಯೂಡೆಲ್ಲಿಯಲ್ಲಿ ಶೀತ ಹೆಚ್ಚಾಗಲು ಕಾರಣವಾಗಿದೆ. ಇನ್ನೂ ಎರಡು ದಿನ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.