ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದ್ದು, ಸಾಮಾನ್ಯ ವರ್ಗದ ಜನರ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು.
ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 20 ಲಕ್ಷ ರೂಗಳ ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಿಶೇಷ ಘಟಕ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡ ಸಮುದಾಯಗಳ ಜನರ ಬಡಾವಣೆಗಳ ರಸ್ತೆಯನ್ನು ಅಭಿವೃದ್ಧಿಪಡಿಸುವ ಮಾದರಿಯಲ್ಲಿಯೇ ಸಾಮಾನ್ಯ ವರ್ಗದ ಜನರ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಿಗೆ ಸದಸ್ಯರೆಲ್ಲರೂ ಆಯ್ಕೆಗೊಳ್ಳುವ ಚುನಾವಣೆ ಮಗಿದ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿರುವುದರಿಂದ ಸದಸ್ಯರೆಲ್ಲರೂ ಹಳ್ಳಿಗಳ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿಯಬೇಕು. ಅಭಿವೃದ್ಧಿ ಕೆಲಸಕ್ಕೆ ಸರ್ಕಾರ ಹಾಗೂ ನಮ್ಮನ್ನು ಕೂಡ ಬಳಸಿಕೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡ ಸ್ಥಳೀಯ ಜನಪ್ರತಿನಿಧಿಗಳ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಡಬೇಕು. ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಬೀಡನಹಳ್ಳಿ ಗ್ರಾಮದಲ್ಲೂ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ಜಿ.ಪಂ ಎಇಇ ಕೆ.ನಾಗೇಂದ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಎಸ್.ಸತೀಶ್ ಚಂದ್ರನ್, ಗ್ರಾ.ಪಂ ಸದಸ್ಯರಾದ ವೈ.ಎಸ್.ರಾ.ಸ್ವಾಮಿ, ವೈ.ಟಿ.ಮಹೇಶ್ ಕುಮಾರ್, ಪ್ರೇಮಮ್ಮ, ಶೈಲಜ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್.ರಂಜಿನಿ, ಕಾರ್ಯದರ್ಶಿ ಟಿ.ಆರ್.ಪುರುಷೋತ್ತಮ್, ಗುತ್ತಿಗೆದಾರ ಯಾಲಕ್ಕಿಗೌಡ, ಮುಖಂಡರಾದ ವೈ.ಎಂ.ಭೋಜರಾಜು, ಬೇವಿನಹಳ್ಳಿ ಸತೀಶ, ದೀಪು ದರ್ಶನ್, ವೈ.ಕೆ.ನವೀನ, ಮಹೇಶ, ಅತ್ತಹಳ್ಳಿ ರವಿ ಹಾಗೂ ಇನ್ನಿತರರು ಹಾಜರಿದ್ದರು.