ಮೈಸೂರು: ದಿವಂಗತ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಆನ್ ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿದರು.
ನಗರದ ಹಾಲಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಬಿಎಸ್‌ವೈ, ವಿಷ್ಣುವರ್ಧನ ಅವರ 70ನೇ ವರ್ಷದ ಹುಟ್ಟುಹಬ್ಬದ, ವಿಶೇಷ ಸಂದರ್ಭದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಹೇಳಿದರು.
ತಮ್ಮ ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ”ಎಂದೇ ಪ್ರಖ್ಯಾತರಾದ ವಿಷ್ಣು ತಮ್ಮ ಶಿಸ್ತು, ಸಂಯಮಗಳಿಂದ ಎಲ್ಲರ ಪ್ರೀತಿಯನ್ನು ಗೆದ್ದಿದ್ದರು. ಚಿತ್ರರಂಗಕ್ಕೆ ರಾಜ್‍ಕುಮಾರ್ ಅವರ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ವಿಷ್ಣುವರ್ಧನ್ ಅವರು ಸಹ ಸೇರಿದ್ದಾರೆ ಎಂದರು.
ಸತತವಾಗಿ 38 ವರ್ಷ ಕಾಲ, ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಂಡಿದ್ದಾರೆ. “ನಾಗರಹಾವು”ಸಿನಿಮಾದಿಂದ “ಆಪ್ತರಕ್ಷಕ”ಸಿನಿಮಾವರೆಗಿನ, ಅವರ ಸಾಧನೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ ಎಂದು ವಿಷ್ಣು ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಷ್ಣುವರ್ಧನ್ ಅವರ ತವರು ಜಿಲ್ಲೆ ಮೈಸೂರಿನಲ್ಲಿ, ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಯಡಿಯೂರಪ್ಪ ಸಂತಸ ಪಟ್ಟರು.
ಶಾಸಕ ಜಿ.ಟಿ. ದೇವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತಿ ವಿಷ್ಣುವರ್ಧನ್, ಶಾಸಕ ಎಸ್.ಎ. ರಾಮದಾಸ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ನಟ ಅನಿರುದ್ಧ್ ಮತ್ತಿತರರು ಇದ್ದರು.