ಮೈಸೂರು: ಕೊರೊನಾ ಸೋಂಕಿತರು ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಇದು ಗ್ರಾಮೀಣ ಭಾಗದಲ್ಲಿ ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಭಾಗಕ್ಕೆ ಈ ನಿಯಮ ಓಕೆ. ಆದರೆ ಗ್ರಾಮಾಂತರದಲ್ಲಿ ಕಷ್ಟಸಾಧ್ಯ. ಕಾರಣ ಅಲ್ಲಿಯ ಮನೆಗಳು ಚಿಕ್ಕದಿರುತ್ತವೆ. ಒಂದೇ ಮನೆಯಲ್ಲಿ ಹೆಚ್ಚು ಜನರು ವಾಸಮಾಡುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗಬಹುದು. ಹೀಗಾಗಿ, ಅಲ್ಲಿ ಹೋಂ ಕ್ವಾರಂಟೈನ್‌ಗೆ ಅವಕಾಶ ಇಲ್ಲ ಎಂದು ತಿಳಿಸಿದರು..
ನಗರಗಳಲ್ಲಿ ಈಗಾಗಲೇ 4 ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ಮುಂದುವರಿದಿದೆ. ಸೋಂಕಿತ ಚೆಸ್ಕಾಂ ಸಿಬ್ಬಂದಿಗೆ ಅಗತ್ಯ ಚಿಕಿತ್ಸೆಯನ್ನು ಆರೋಗ್ಯ ಸಿಬ್ಬಂದಿ ನೀಡುತ್ತಿದ್ದಾರೆ. ಆದರೆ, ಚಿಕಿತ್ಸೆಗೆ ಬೇಕಾದ ಅಗತ್ಯ ವಸ್ತುಗಳನ್ನು ಅವರೇ ಕೊಳ್ಳಬೇಕು. ಅಂಥವರು 17 ದಿನ ಕಡ್ಡಾಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಹೇಳಿದರು.
ಇನ್ನು ಸೋಂಕಿತರು ಪ್ರತ್ಯೇಕ ಕೊಠಡಿ ಹಾಗೂ ಶೌಚಾಲ ಬಳಸಬೇಕು. ಇದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆರೋಗ್ಯ ಸಿಬ್ಬಂದಿ ಸೋಂಕಿತರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮನೆಯಲ್ಲೇ ಚಿಕಿತ್ಸೆ ಕೊಡಬೇಕೆ ಬೇಡವೇ ಎಂದು ಸೂಚಿಸುತ್ತಾರೆ. ಒಂದುವೇಳೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲ ಎಂದರೆ ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೇ ಕರೆತಂದು ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.