ಮೈಸೂರು: ಬಿಜೆಪಿ ನಾಯಕರು ನೀಡಿರುವ ನೋಟಿಸ್ ಗೆ ನಾನೇನೂ ಹೆದರುವುದಿಲ್ಲ. ನಾನೂ ಒಬ್ಬ ಲಾಯರ್ ತಾನೇ” ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ಆರೋಪಕ್ಕೆ ನೋಟಿಸ್ ನೀಡಿದ ವಿಚಾರದ ಬಗ್ಗೆ ಕಿಡಿಕಾರಿದ್ದು, ನೋಟಿಸ್ ಬಂಡವಾಳ ಏನುಯೆಂದು ನನಗೆ ಗೊತ್ತಿಲ್ವಾ, ಆ ನೋಟಿಸ್ ಗೆ ನಾನೇನು ಹೆದರಿಕೊಳ್ತಿನಾ. ನಾನು ಆರೋಪ ಮಾಡಿರೋದು ಸರ್ಕಾರದ ಮೇಲೆ. ಅವನ್ಯಾರೋ ನೋಟಿಸ್ ಕೊಟ್ಟಿದ್ದಾನೆ ಎಂದರೆ ಏನ್ ಪ್ರಯೋಜನ ಎಂದು ಲೇವಡಿ ಮಾಡಿದ್ದಾರೆ.
ಡಿಕೆಶಿ ತಪ್ಪಿತಸ್ಥ ಅಂತ ತೀರ್ಮಾನ ಆಗಿದ್ಯಾ ಅದು ರಾಜಕೀಯ ದುರುದ್ದೇಶದಿಂದ ಹಾಕಿರುವ ಕೇಸ್. ಅವರಿಗೆ ಕೋರ್ಟು ಜಾಮೀನು ಕೊಟ್ಟಿದೆ. ಆ ಬಗ್ಗೆ ನಾನು ಮಾತನಾಡೋಲ್ಲ ಎಂದು ಜೈಲಿಗೆ ಹೋಗಿ ಬಂದ ಡಿಕೆಶಿ ಪಕ್ಕದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿ, ಇವರಿಗೇನು ಬಹಳ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ ಮತ್ತ್ಯಾಕೆ ಈಗ ಅದರ ಬಗ್ಗೆ ಚರ್ಚೆ. ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತಾಡ್ಲಾ? ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ, ಸರ್ಕಾರದಿಂದ ಲೂಟಿ ಮಾಡಿದ ದುಡ್ಡಿನಿಂದ ವಾಚ್ ಖರೀದಿಸಿದ್ನಾ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದ ಅವರು, ಅದನ್ನ ಯಾರೋ ಕೊಟ್ಟಿದ್ರು, ಅದಕ್ಕೆ ಅವರು ಅಫಿಡೇವಿಟ್ ಕೊಟ್ಟಿದ್ದಾರೆ. ಇನ್ನು ಈಗ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುವ ಉದ್ದೇಶದಿಂದ ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ, ಅಷ್ಟೆ ಹೊರತು ಬೇರೇನಲ್ಲ, ಇದಕ್ಕೆ ಪುನಃ ಪ್ರತಿಕ್ರಿಯಿಸುವುದಿಲ್ಲ ಎಂದು ಹೂಬ್ಲೋಟ್ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ತೆರೆಯೆಳೆದರು.