ತುರಗನೂರು (ಮೈಸೂರು): ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಮಹಿಳೆಗೆ ಸೋಮವಾರ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಅವರನ್ನು ಇಂದು ಮುಂಜಾನೆ ಕರೆದುಕೊಂಡು ಹೋಗಿ ಮೈಸೂರಿನ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತಳಿದ್ದ ಗ್ರಾಮದ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಂಕಿತ ಮಹಿಳೆ ಅರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಆಗಿದ್ದಾರೆ. ಅವರು ಕೆಲಸಕ್ಕೆ ಹೋಗಿದ್ದ ವೇಳೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ. ಇನ್ನು ಅವರ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲು ದ್ರವವನ್ನು ಕೋವಿಡ್ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯಲ್ಲಿ ಸುಮಾರು 12 ಜನಕ್ಕೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅರಕೆರೆಯ ಕೆಲವು ಬೀದಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜತೆಗೆ ಅರಕೆರೆ ಆಸ್ಪತ್ರೆಯನ್ನು ಸೀಲ್‌ಡೌನ್‌ಮಾಡಲಾಗಿದೆ.