NEWSಕೃಷಿದೇಶ-ವಿದೇಶನಮ್ಮರಾಜ್ಯ

ಸಂಘಕ್ಕಿಂದು ಅವಿಸ್ಮರಣೀಯ ದಿನ: ಹಾಸನ ಜಿಲ್ಲೆಯ ಸಹಕಾರಿ ಸಾಧಕರೊಂದಿಗೆ ಪ್ರಧಾನಿ ಸಂವಾದ

ವಿಜಯಪಥ ಸಮಗ್ರ ಸುದ್ದಿ

ಹಾಸನ‌: ಜಿಲ್ಲೆಯ ಉಗನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕಿಂದು ಅವಿಸ್ಮರಣೀಯ ದಿನ.

ಹೌದು‌ ದೇಶದ ಪ್ರಧಾನಿ ಸಹಕಾರ ಸಂಘದ ಪ್ರಗತಿ ಹಾಗೂ ರೈತ ಪರ ಕಾರ್ಯಗಳಿಗಾಗಿ ಸಂಸ್ಥೆಯನ್ನು ಗುರುತಿಸಿ ಅದರ ಪ್ರತಿನಿಧಿಗಳೊಂದಿಗೆ ನೇರ ವಿಡಿಯೋ ಸಂವಾದ ಮಾಡಿದ ಕ್ಷಣದ ಸಂಭ್ರಮ ಇದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿ ಆತ್ಮ ‌ನಿರ್ಭರ್ ಅನ್ನದಾತ  ಕುರಿತ ನೇರ ಟಿ.ವಿ. ಸಂವಾದದಲ್ಲಿ ಜಿಲ್ಲೆಯ ಉಗನೆ ಪಂಚಾಯಿತಿಯ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಅವರೊಂದಿಗೆ ಮಾತನಾಡಿದರು. ಇದು ಇಡೀ ದೇಶದ ಗಮನ ಸೆಳೆದಿದೆ.

ಬಸವೇಗೌಡ  ಇಂದು ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ದೇವೇಂದ್ರ, ನಿರ್ದೇಶಕ  ಮಧನ್,ಮಾಜಿ ಅಧ್ಯಕ್ಷ ರಾಘವಾಚಾರ್,  ರೈತರಾದ ಚಂದ್ರು ಅವರೊಂದಿಗೆ ಬೆಂಗಳೂರಿನ ನಬಾರ್ಡ್ ಕಚೇರಿಯಿಂದ  ಪ್ರಧಾನಿಯವರೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಭಾಷಾಂತರಕಾರರ ನೆರವಿನೊಂದಿಗೆ ಬಸವೇಗೌಡ ಅವರೊಂದಿಗೆ ಹಿಂದಿಯಲ್ಲಿ  ಮಾತನಾಡಿದ ಪ್ರಧಾನಿ ಸಂಸ್ಥೆಯ ಪ್ರಾರಂಭ, ಬೆಳವಣಿಗೆ, ಸಾಧನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ರೈತರಿಗೆ  17,500 ಕೋಟಿ ರೂ ಮೊತ್ತದ ಕಿಸಾನ್ ಉಡುಗೊರೆ ಪ್ರಕಟಿಸಿದ  ಸಂದರ್ಭದಲ್ಲಿ ನಡೆಸಿದ ವಿಡಿಯೋ ಸಂವಾದದ ಜಿಲ್ಲೆಯ ರೈತರ ಕೃಷಿ ಸಂಬಂಧಿಸಿದ ವಿಷಯಗಳು, ಸಮಸ್ಯೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು.

ಹಾಸನ ಜಿಲ್ಲೆಯ ರೈತರು ಹಾಗೂ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೊಂದಿಗೆ ಕೃಷಿ ಚಟುವಟಿಕೆಗಳ ಕಾರ್ಯಾಭಿವೃದ್ಧಿ ಕುರಿತು ಸಂವಾದ ನಡೆಸಿ ಮಾತನಾಡಿದ ಅವರು ರೈತರು ಕಿಸಾನ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಂವಾದದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ರೈತರಿಗೆ ತಮ್ಮ ಪರಿಚಯ ಹಾಗೂ ಜಿಲ್ಲೆಯಲ್ಲಿನ ಕೃಷಿ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸುವಂತೆ ಕೇಳಿದರು. ಈ ಸಂದರ್ಭದಲ್ಲಿ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾದ ಬಸವೇಗೌಡ  ಉತ್ತರಿಸಿ ಕಳೆದ 44 ವರ್ಷಗಳ ಹಿಂದೆ ಸಂಘವನ್ನು ಆರಂಭಿಸಿದ್ದು, 29 ಗ್ರಾಮಗಳ 2,300 ಕಿಸಾನ್ ಕುಟುಂಬಸ್ಥರು ಇದರ ಸದಸ್ಯರಾಗಿದ್ದಾರೆ ಹಾಗೂ ವಾರ್ಷಿಕವಾಗಿ ಸಂಘ 50 ಕೋಟಿ ರೂ.ಗಳ ವಹಿವಾಟು ನಡೆಸುತ್ತದೆ. ಜಿಲ್ಲೆಯಲ್ಲಿ ಶುಂಠಿ, ಅಡಿಕೆ, ಮೆಕ್ಕೆಜೋಳ, ಆಲೂಗೆಡ್ಡೆ ಸೇರಿ ಇತರೆ ಬೆಳೆಗಳನ್ನು ಬೆಳೆಯುವುದಾಗಿ  ವಿವರಿಸಿದರು.

ಮೋದಿಯವರು ಸಹಕಾರಿ‌ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ನಿಮಗೆ ಏಕೆ ಬಂತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಬಸವೇಗೌಡ, ರೈತರಿಗೆ ಸ್ಥಳೀಯವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕಳೆನಾಶಕ ಸೇರಿ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳು ದೊರೆಯುತ್ತಿರಲಿಲ್ಲ ಹಾಗಾಗಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈಗ ರೈತರಿಗೆ ಈ ಸಂಘದ ವತಿಯಿಂದ ಕೃಷಿ ಸಂಬಂಧಿಸಿದ ವಸ್ತುಗಳ ಜತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ರೈತರ ಈ ಉತ್ತಮ ಚಟುವಟಿಕೆಗಳ ಬಗ್ಗೆ ತಿಳಿದ ಪ್ರಧಾನಿ ಮೋದಿ ಸಂಘದ ವತಿಯಿಂದ ಈಗ ಯಾವ ಯೋಜನೆಯನ್ನು ರೂಪಿಸಿದ್ದೀರಿ ಹಾಗೂ ಅದರಿಂದ ರೈತರಿಗೆ ಯಾವ ರೀತಿಯ ಅನುಕೂಲವಾಗುತ್ತದೆ ಎಂದು ಪ್ರಶ್ನೆಸಿದರು.

ಅದಕ್ಕೆ ಬಸವೇಗೌಡ  ಗ್ರಾಮದಲ್ಲಿ 1200 ಮೆಟ್ರಿಕ್ ಟನ್ ನಷ್ಟು ದಾಸ್ತಾನು ಮಾಡಬಹುದಾದ ಗೋದಾಮು ನಿರ್ಮಿಸಲು ಯೋಜಿಸಿದ್ದು, 40 ಲಕ್ಷ ರೂ. ವೆಚ್ಚವಾಗಲಿದೆ. ಅದಕ್ಕಾಗಿ ನಬಾರ್ಡ್ ನಿಂದ 32 ಲಕ್ಷ ರೂ. ಸಾಲ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಲ್ಲದೆ, ಈ ಗೋದಾಮು ನಿರ್ಮಾಣದಿಂದ ಸ್ಥಳೀಯವಾಗಿ ಸುಮಾರು 3,000 ರೈತರಿಗೆ ಉಪಯೋಗವಾಗಲಿದೆ. ರೈತರು ಬೆಳೆಯುವ ಅಡಿಕೆ, ಮೆಕ್ಕೆಜೋಳ ಇನ್ನಿತರೆ ಬೆಳೆಗಳನ್ನು ಉತ್ತಮ ಬೆಲೆ ಸಿಗುವವರೆಗೂ ವ್ಯವಸ್ಥಿತವಾಗಿ ದಾಸ್ತಾನು ಮಾಡಬಹುದು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜತೆಗೆ ಕೃಷಿ ಆದಾಯ ಹೆಚ್ಚಲಿದೆ. ರೈತರು ದಾಸ್ತಾನು ಮಾಡಿದ ಬೆಳೆಗೆ ಸಾಲ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ, ಇದರ ನಿರ್ಮಾಣ ಕೆಲಸ ಇನ್ನು 3 ತಿಂಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.

ಬಸವೇಗೌಡ ಅವರು ನೀಡಿದ ಮಾಹಿತಿಯಿಂದ ಸಂತೋಷಗೊಂಡ ಪ್ರಧಾನಿ ನರೇಂದ್ರ ಮೋದಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ದೂರದೃಷ್ಟಿಯಿಂದ ಸಹಕಾರಿ ಸಂಘದ ಮೂಲಕ ಮಾಡುತ್ತಿರುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಹಾಸನ ಜಿಲ್ಲೆಯ ರೈತರಂತೆ ಕರ್ನಾಟಕದ ಪ್ರತಿಯೊಂದು ಗ್ರಾಮದ ರೈತರು ಮುಂದಾಲೋಚನೆಯಿಂದ ತಮ್ಮ ಸಂಘಗಳ ಮೂಲಕ ಸಹಕಾರದಿಂದ ಕೃಷಿ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆದರೆ ಅನ್ನದಾತರ ಆತ್ಮ ನಿರ್ಭರ್ ಯೋಜನೆ ಯಶಸ್ವಿಯಾಗಲಿದೆ ಎಂದು ಪ್ರಧಾನಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಹರ್ಷ ವ್ಯಕ್ತ ಪಡಿಸಿದ ಬಸವೇಗೌಡ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಸಂವಾದ ನಡೆಸಲು ತಮಗೆ ದೊರೆತ ಅವಕಾಶದ ಬಗ್ಗೆ ಬಸವೇಗೌಡ ಹರ್ಷ ವ್ಯಕ್ತ ಪಡಿಸಿದ್ದಾರೆ.

ಸಹಕಾರಿ‌ ಕ್ಷೇತ್ರದ ಸಾಧನೆ ಗುರುತಿಸಿ ಪ್ರಧಾನಿಯವರು ತಮ್ಮೊಂದಿಗೆ‌ ಮಾತನಾಡಿದ್ದಾರೆ .ಇದು ತಮಗೆ ಅಪಾರ  ಸಂತಸ ತಂದಿದೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಹಾಸನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಖುಷಿ ಹಂಚಿಕೊಂಡ  ಅವರು ಇದು ತಮಗೆ ಇನ್ನಷ್ಟು ಸಾಧನೆಗೆ ಸ್ಫೂರ್ತಿ ನೀಡಿದೆ,ಈಗ ಮಾಡಿರುವುದು ಬಹಳ ಕಡಿಮೆ, ಆಗಬೇಕಿರುವದು ತುಂಬಾ ಇದೆ ಎನಿಸುತ್ತಿದೆ. ಎಲ್ಲರ ಸಹಕಾರ ಪಡೆದು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ