- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಾವು ಓಟು ಹಾಕಿ ಗೆಲ್ಲಿಸಿರುವ ಜನಪ್ರತಿನಿಧಿಗಳು ನಮ್ಮ ನೋಟು ನುಂಗುತ್ತಿದ್ದಾರೆ. ಬೇರೆ ಬೇರೆ ರೂಪದಲ್ಲಿ ಹಣ ಖರ್ಚು ಮಾಡಿ ನಮ್ಮನ್ನೆಲ್ಲ ದೋಚುತ್ತಿದ್ದಾರೆ, ಆದರೂ ನಾವು ದನಿ ಎತ್ತದೆ ಮೌನವಾಗಿದ್ದೇವ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 27.7 ಕೋಟಿ ರೂ.ಗೆ ಖರೀದಿಸಿದ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಬಳಕೆ, ಸ್ಟಾಕ್ ಪುಸ್ತಕಗಳ ನಿರ್ವಹಣೆಯಲ್ಲಿನ ವ್ಯತ್ಯಾಸ, ನಗದು ಪುಸ್ತಕದ ಅಸಮರ್ಪಕ ನಿರ್ವಹಣೆ, ಪ್ರಯಾಣಿಕರ ವಾಹನದ ನೋಂದಣಿ ಹೊಂದಿರುವ ವಾಹನವನ್ನು ಕಸ ಸಾಗಿಸುವ ಲಾರಿ ಎಂದು ನೀಡಿರುವ ತಪ್ಪು ಪಾವತಿ, ಹೆಚ್ಚುವರಿ ಡೀಸೆಲ್ ಬಿಲ್‌ಗಳ ಪಾವತಿ, ಕಾಂಪ್ಯಾಕ್ಟರ್ ವಾಹನಗಳ ರಿಪೇರಿ ಮತ್ತು ನಿರ್ವಹಣೆಗೆ ಎಂದು 70 ಲಕ್ಷ ಹಣವನ್ನು ವ್ಯವ ಮಾಡಿರುವ ಬಗ್ಗೆ ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದ್ದರೂ, ಇಲ್ಲಿಯವರೆಗೆ, ಅಕ್ರಮ ಎಸಗಿದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು.
ಪ್ರಸ್ತುತ ಲೆಕ್ಕ ಪರಿಶೋಧನೆಯನ್ನು ಪಶ್ಚಿಮ ವಲಯದಲ್ಲಿ ನಡೆಸಲಾಗಿದೆ ಮುಖ್ಯವಾಗಿ ಮಲ್ಲೇಶ್ವರಂ ಮತ್ತು ಗೋವಿಂದರಾಜನಗರ ವಿಧಾನಾಸಭಾ ಕ್ಷೇತ್ರಗಳಲ್ಲಿ ಮಾತ್ರ ಪರಿಶೋಧನೆ ನಡೆಸಿದ್ದು ಈ ಎರಡೂ ಕ್ಷೇತ್ರಗಳು ಬಿಜೆಪಿಯವರ ಕೈಯಲ್ಲೆ ಇವೆ. ಮಲ್ಲೇಶ್ವರಂ ಶಾಸಕರೂ, ಉಪಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ ಅವರ ಮೂಗಿನ ಕೆಳಗೆ ನಡೆದಿರುವ ಈ ಅವ್ಯವಹಾರ ಅತ್ಯಂತ ನಾಚಿಕೆಗೇಡಿನ ಸಂಗತಿ. ಎಲ್ಲಾ ವಾರ್ಡಿನ ಕಾರ್ಪೋರೇಟರ್‌ಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂಪೂರ್ಣ ತನಿಖೆ ಮುಗಿಯುವ ತನಕ ಈ ಅವ್ಯವಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ನಷ್ಟಕ್ಕೆ ಕಾರಣರಾದ ವ್ಯಕ್ತಿಗಳಿಂದ ಹಣವನ್ನು ವಸೂಲಿ ಮಾಡಬೇಕು. ಬೆಂಗಳೂರಿನ ಎಲ್ಲಾ ವಿಭಾಗಗಳು ಮತ್ತು 198 ವಾರ್ಡ್‌ಗಳಲ್ಲಿಯೂ ಇದೇ ರೀತಿಯ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಸರ್ಕಾರ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ, ಆಮ್ ಆದ್ಮಿ ಪಕ್ಷವು ಈ ಭ್ರಷ್ಟಾಚಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಹಾಗೂ ಜನತಾ ನ್ಯಾಯಾಲಯದ ಎದುರು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಇದ್ದರು.