ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಗವಾರ ವಾರ್ಡ್ ಸಂಖ್ಯೆ-23 ವ್ಯಾಪ್ತಿಯಲ್ಲಿ “ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021” ರ ಅಂಗವಾಗಿ ವೀರಣ್ಣ ಪಾಳ್ಯ ಮೇಲುಸೇತುವೆ ಕೆಳಭಾಗದಲ್ಲಿ ಇಂದು ರಂಗೋಲಿ ಹಬ್ಬ ವನ್ನು ಆಚರಿಸಲಾಯಿತು.
ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿಕರಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಈ ಸಂಬಂಧ ಇಂದು ಪೌರಕಾರ್ಮಿಕರು, ನಾಗರಿಕರು, ಲಿಂಕ್ ವರ್ಕರ್ಸ್ ಗಳು ಹಾಗೂ ಸ್ವಯಂಸೇವಕರು ಸೇರಿ ಸುಮಾರು 100 ಮಂದಿ “ರಂಗೋಲಿ ಹಬ್ಬ”ದಲ್ಲಿ ಪಾಳ್ಗೊಂಡು ವಿವಿಧ ಚಿತ್ತಾರದ ರಂಗೋಲಿಗಳನ್ನು ಬಿಡಿಸಿದರು. ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ವು ಇನ್ನು 2 ತಿಂಗಳು ನಡೆಯಲಿದ್ದು, ಬಿಬಿಎಂಪಿಯು ಉತ್ತಮ ರ‍್ಯಾಂಕ್ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಅದರಂತೆ ಇಂದು ರಂಗೋಲಿ ಹಬ್ಬವನ್ನು ಆಯೋಜಿಸಲಾಗಿದೆ.
ಇದೇ ರೀತಿ ನಗರದಲ್ಲಿ ಸ್ವಚ್ಛತೆ ಕಾಪಾಡಿ ಸ್ವಚ್ಛ ನಗರವನ್ನಾಗಿ ಮಾಡಲು ನಾಗರಿಕರ ಸಹಕಾರ ಬಹಳ ಮುಖ್ಯವಾಗಿದ್ದು, ಸ್ವಚ್ಛತೆ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸೈಕ್ಲಥಾನ್, ಬೀದಿ ನಾಟಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು.
ನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿ ಪಾಳ್ಗೊಂಡು ನಗರಕ್ಕೆ ಉತ್ತಮ ರ‍್ಯಾಂಕ್ ಪಡೆಯಲು ಸಹಕರಿಸಬೇಕು. ಕಳೆದ ವರ್ಷ 2020ರಲ್ಲಿ ಬಿಬಿಎಂಪಿಗೆ 214 ರ‍್ಯಾಂಕ್ ಬಂದಿದ್ದು, ಈ ಬಾರಿ 2021ರಲ್ಲಿ ಇನ್ನೂ ಉತ್ತಮ ರ‍್ಯಾಂಕ್ ಗಳಿಸಲು ಸಹಕರಿಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್ ಮನವಿ ಮಾಡಿದರು.
ಸಾರ್ವಜನಿಕ ಸಹಭಾಗಿತ್ವ
ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಾಗರಿಕರ ಪ್ರತಿಕ್ರಿಯೆ(Feedback) ಬಹಳ ಮುಖ್ಯವಾಗಿದ್ದು, ಇದುವರೆಗೆ 65,000 ನಾಗರಿಕರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು https://swachhsurvekshan2021.org/CitizenFeedback%2c ಲಿಂಕ್ ಗೆ ನಾಗರಿಕರು ಭೇಟಿ ನೀಡಿ ತಮ್ಮ ಅಮೂಲ್ಯವಾದ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ರ‍್ಯಾಂಕ್ ಬರಲು ಸಹಕರಿಸಬೇಕು ಎಂದು ರಂದೀಪ್ ತಿಳಿಸಿದರು.
ಶಾಸಕ ಕೆ.ಜೆ.ಜಾರ್ಜ್, ಅಧಿಕಾರಿಗಳು ಉಪಸ್ಥಿತರಿದ್ದರು.