ವಿಜಯಪಥ ಸಮಗ್ರ ಸುದ್ದಿ
ಮುಂಬೈ: ರೆಪೊ ದರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬದಲಾಯಿಸದೆ ಶೇ.4ರಷ್ಟು ಉಳಿಸಿಕೊಂಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿದ್ದರೆ ಭವಿಷ್ಯದಲ್ಲಿ ದರ ಕಡಿತದ ಸೂಚನೆಯನ್ನು ಕೂಡ ಆರ್ ಬಿಐ ನೀಡಿದೆ.
ಇಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕೇಂದ್ರ ಸರ್ಕಾರದ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರ ಯಥಾಪ್ರಕಾರ ಶೇ.4ರಷ್ಟು ಮತ್ತು ರಿವರ್ಸ್ ರೆಪೊ ದರ ಶೇ. 3.35ರಷ್ಟು ಅಂದರೆ ಈ ಹಿಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದರು.
ಕಳೆದ ಮಾರ್ಚ್ ನಿಂದದಲ್ಲೂ ದೇಶದ ಬೆಳವಣಿಗೆಯನ್ನು ಬೆಂಬಲಿಸಲು ರೆಪೊ ದರವನ್ನು 115 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿರುವ ಆರ್ ಬಿಐ ವಿತ್ತೀಯ ದರವನ್ನು ಬದಲಾಯಿಸದೇ ಹಾಗೆಯೇ ಮುಂದುವರಿಸುವ ನಿರ್ಧಾರವನ್ನು ನಾಲ್ಕನೇ ಬಾರಿಯು ಕಾಯ್ದುಕೊಂಡಿದೆ.
ಕಳೆದ ವರ್ಷ ಮೇ 22ರಂದು ಆರ್ ಬಿಐ ವಿತ್ತೀಯ ದರವನ್ನು ಪರಿಷ್ಕರಿಸಿತ್ತು. ಮುಂದಿನ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಕೇಂದ್ರ ಬಜೆಟ್ ಮಂಡನೆಯಾದ ನಂತರ ವಿತ್ತೀಯ ದರ ನಿಗದಿ ಮಾಡುವ ತಂಡ ಇಂದು ನಡೆಸಿದ ಸಭೆಯಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವನ್ನು ಶೇ. 14.5ರಷ್ಟು ಮತ್ತು ವಿತ್ತೀಯ ಕೊರತೆಯನ್ನು ಶೇ. 6.8ರಷ್ಟು ಸೂಚಿಸಿದೆ. ಇನ್ನು 2021 ರ ಮಾರ್ಚ್ 31 ರವರೆಗೆ ವಾರ್ಷಿಕ ಹಣದುಬ್ಬರ ಶೇ.4 ರಂತೆ ಕಾಯ್ದುಕೊಳ್ಳಲು ವಿತ್ತೀಯ ನೀತಿ ಸಮಿತಿಗೆ ಆದೇಶ ನೀಡಿದೆ.
ರೆಪೊ ದರ: ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ. ಹೀಗಾಗಿ ಅದು ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕ್‌ಗಳಿಗೆ ಕೊಡುವ ಸಾಲದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವನ್ನೇ ರೆಪೊ ದರ ಎಂದು ಕರೆಯಲಾಗುವುದು.
ಸಾಧ್ಯವಾದಷ್ಟು ಬ್ಯಾಂಕ್‌ಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತವೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ಈ ಹಣದುಬ್ಬರದ ವೇಳೆ ಕೇಂದ್ರ ಬ್ಯಾಂಕ್ ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ.
ರಿವರ್ಸ್ ರೆಪೊ ದರ: ಪ್ರತಿಯಾಗಿ ಅಲ್ಪಾವಧಿಗೆ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆದು ಆ ಹಣದ ಮೇಲೆ ಕೊಡೊವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯಲಾಗುತ್ತದೆ.