ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಜಾರ್ಖಂಡ್ ರಾಜ್ಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದ ತೀರ್ಥಹಳ್ಳಿ ಮಂಡಗದ್ದೆ ಮೂಲದ ನ್ಯಾ.ರಾಮಾಜೋಯಿಸ್ (89) ಇಂದು ಬೆಳಗ್ಗೆ 7.30ರಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನ್ಯಾ. ರಾಮಾಜೋಯಿಸ್ ಅವರು ಮಂಗಳವಾರ ಬೆಳಗ್ಗೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ನ್ಯಾ.ರಾಮ ಜೋಯಿಸ್ ಅವರು 1932ರ ಜುಲೈ 27ರಂದು ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಅರಗ ಗ್ರಾಮದಲ್ಲಿ ಜನಿಸಿದ್ದರು. 1992ರಲ್ಲಿ ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.
1975-77ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರೊಂದಿಗೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು.
2002ರಲ್ಲಿ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಬಿಹಾರ ರಾಜ್ಯದ ರಾಜ್ಯಪಾಲರಾಗಿ ನ್ಯಾ.ರಾಮ ಜೋಯಿಸ್ ಅವರು ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಅವರು 2014ರಲ್ಲಿ ನಿವೃತ್ತರಾಗಿದ್ದರು.