ಬೆಂಗಳೂರು: ಸುರಕ್ಷತೆ ನಿಯಮ ಪಾಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕು ಚಲಾಯಿಸಿ ಎಂದು ಉಪ ಚುನಾವಣೆ ಮತದಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಎಲ್ಲಾ ಸುರಕ್ಷತೆ ನಿಯಮಗಳನ್ನು ಪಾಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸುವಂತೆ ಯಡಿಯೂರಪ್ಪ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ರಾಜ್ಯದಲ್ಲಿ ನಡೆಯುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು, ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ ಏಳು ಗಂಟೆಯಿಂದಲೇ ಉಭಯ ಕ್ಷೇತ್ರಗಳಲ್ಲೂ ಮತದಾನ ಆರಂಭಗೊಂಡಿದ್ದು, ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಎರಡೂ ಕ್ಷೇತ್ರಗಳಲ್ಲಿ ಕಂಡುಬಂದಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.
ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿರೋರು, ಕ್ವಾರಂಟೈನ್‍ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೊನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಬೆಳಗ್ಗೆಯೇ ಜ್ಞಾನಭಾರತಿ ವಾರ್ಡ್‌ನಲ್ಲಿರುವ ಎಚ್ಎಂಆರ್ ಕಾನ್ವೆಂಟ್ನ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದರು, ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ವೋಟ್ ಮಾಡಿದ್ದಾರೆ. ಈ ಮೂವರು ಅಭ್ಯರ್ಥಿಗಳು ನಾವೇ ಗೆಲ್ಲೋದು ಎಂದು ಆತ್ಮವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ.