ಬೆಂಗಳೂರು: ಬರಹಗಳ ಮೂಲಕವೇ ಬೆರಗು ಮೂಡಿಸಿ ಆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಅಕ್ಷರ ಮಾಂತ್ರಿಕ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ನ ಸ್ಥಾಪಕ ರವಿ ಬೆಳೆಗೆರೆ (62) ಇಂದು ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇಂದು ಅವರ ಪ್ರಾರ್ಥಿವ ಶರೀರವನ್ನು ಅವರು ಸ್ಥಾಪಿಸಿರುವ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನ, ಭಾವನಾ, ಕರ್ಣ ಹಾಗೂ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಅಗಲಿದ್ದಾರೆ.1995 ಸೆಪ್ಟೆಂಬರ್ 25ರಂದು ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದ ಅವರು ತನಿಖಾ ಪತ್ರಿಕೋದ್ಯಮದ ಮೂಲಕ ಭಾರಿ ಸಂಚಲನವನ್ನೇ ಮೂಡಿಸಿದ್ದರು. ಬಳ್ಳಾರಿಯಿಂದ 400 ರೂ. ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದ ಇವರು ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡಿದ್ದವರು. ಪ್ರಾರ್ಥನಾ ಎಂಬ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ.
1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದ ಅವರು, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ರವಿ ಬೆಳೆಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು ಸೇರಿ ಅನೇಕ ಜನಪ್ರಿಯ ಕೃತಿಗಳನ್ನು ರಚಿಸಿದ್ದರು.
ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ಸಂದಿವೆ.