ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರಪಾಲಿಕೆ ಎದುರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವುದನ್ನು ತೆರವುಗೊಳಿಸಿ ಭಗವಾಧ್ವಜ ಹಾರಿಸಲು ಗುರುವಾರ ಬರುತ್ತಿದ್ದ ನೆರೆಯ ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರನ್ನು ರಾಜ್ಯದ ಪೊಲೀಸರು ಗಡಿಯಲ್ಲೇ ತಡೆದರು.
ರಾಜ್ಯದ ಗಡಿ ತಾಲೂಕಿನ ಶಿನ್ನೋಳಿಯಲ್ಲಿ ಸೇರಿದ್ದ ಕಾರ್ಯಕರ್ತರು, ಗಡಿಯಲ್ಲಿ ತಮ್ಮನ್ನು ತಡೆದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಜಟಾಪಟಿ ನಡೆಸಿದರು. ಪೊಲೀಸರನ್ನು ತಳ್ಳಾಡಿ ಉದ್ಧಟತನದಿಂದ ವರ್ತಿಸಿದರು.
ಪಾಲಿಕೆ ಮುಂಭಾಗದ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಬೆಳಗಾವಿ ಮಹಾನಗರಪಾಲಿಕೆ ಎದುರು ಭಗವಾಧ್ವಜ ಸ್ಥಾಪಿಸುತ್ತೇವೆ ಎಂದು ಜೈ ಭವಾನಿ, ಜೈ ಶಿವಾಜಿ ಎಂಬ ಘೋಷಣೆಗಳೊಂದಿಗೆ ನುಗ್ಗುತ್ತಿದ್ದರು.
ಶಿವಸೇನಾ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದಾವಣೆ ನೇತೃತ್ವದಲ್ಲಿ ಕಾರ್ಯಕರ್ತರು ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಕಡೆಯಿಂದ ಬಂದು ಜಮಾಯಿಸಿದ್ದರು. ಮುನ್ಸೂಚನೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಆ ಕಾರ್ಯಕರ್ತರನ್ನು ತಡೆದರು. ಹೀಗಾಗಿ, ಅರ್ಧ ಗಂಟೆಯವರೆಗೆ ರಸ್ತೆಯಲ್ಲೇ ಪ್ರತಿಭಟಿಸಿ ಮರಳಿದರು. ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಪೊಲೀಸ್ ಭದ್ರತೆ ಮುಂದುವರಿದಿದೆ.
ಈ ನಡುವೆ, ಕೋನೆವಡಿ ಗ್ರಾಮದಲ್ಲಿ ಶಿವಸೇನಾದವರು ಭಗವಾಧ್ವಜ ಹಾರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಏಕೀಕ ರಣ ಸಮಿತಿ ನಗರದಲ್ಲಿ ಕೈಗೊಂಡಿದ್ದ ಮೆರವಣಿಗೆಯನ್ನು ಪೊಲೀಸರ ಅನುಮತಿ ಸಿಗದ ಕಾರಣ ಮುಂದೂಡಿತು.