ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಕೇಕೆ ನಡುವೆ ರಾಜ್ಯ ಸರ್ಕಾರದ ಬುಡ ಅಲುಗಾಡತೊಡಗಿದೆ. ಅಧಿಕಾರಶಾಹಿ ಬಿಜೆಪಿಯ ಶಾಸಕರು, ಸಚಿವರ ನಡುವೆ ಅಸಮಾಧಾನದ ಹೊಗೆಯಾಡುತ್ತಿದೆ. ಇತ್ತ ಕೇಂದ್ರ ಸರ್ಕಾರ ಸಿಎಂ ಯಡಿಯೂರಪ್ಪ ಅವರೆಗೆ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಸಿಎಂ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.
ಈ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನೀವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತಿದ್ದೆವು ಎನ್ನುವ ಮೂಲಕ ಸಚಿವ ಸುಧಾಕರ್ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, ಸಚಿವರು ಆತ್ಮವಲೋಕನ ಮಾಡಿಕೊಳ್ಳಬೇಕು. ಕೆಲಸ ಮಾಡುತ್ತಿದ್ದೀವಾ ಇಲ್ವಾ ಅಂತ. ಯಾರಿಗೆ ಯಾವ ಜವಾಬ್ದಾರಿ ಇದೆ ಅಂತ ನಾವಾಗಲಿ, ಮುಖ್ಯಮಂತ್ರಿಗಳಾಗಲಿ ಹೇಳೋದಲ್ಲ. ಅವರೆ ಅರ್ಥ ಮಾಡಿಕೊಳ್ಳಬೇಕು ಸ್ವಪಕ್ಷದ ಸಚಿವರ ವಿರುದ್ಧವೇ ಕಿಡಿಕಾರಿದರು.
ಇನ್ನು ಮುಖ್ಯಮಂತ್ರಿಗಳು ಈ ಇಳಿ ವಯಸ್ಸಿನಲ್ಲೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ, ಸಚಿವರಿಗೆ ಏನಾಗಿದೆ. ಎಲ್ಲಾ ಸಚಿವರು ಸರ್ಕಾರಕ್ಕೆ ಪಕ್ಷಕ್ಕೆ ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದರು.
ಇತ್ತ ಕಳೆದ ವಾರ ಕಾಲ್ ಮಾಡಿ ಅಕ್ಕಿ ಕೊಡಿ ಎಂದವನಿಗೆ ಸಾಯುವುದೇ ಒಳ್ಳೇದು ಎನ್ನುವ ಮೂಲಕ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಮತ್ತೆ ತಮ್ಮ ಅಸಂಬದ್ಧ ಮಾತಿನ ಮೂಲಕ ಸುದ್ದಿಯಾಗಿದ್ದಾರೆ. ಅಧಿಕಾರಿಗಳು, ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ನೀವು ಬದುಕಬೇಕೋ ? ಗೊತ್ತಿಲ್ಲ, ನಾನಂತು ಬದುಕಬೇಕು ಎಂಬ ಹೇಳಿಕೆ ನೀಡಿ ಉಳಿದವರ ಬಗ್ಗೆ ಸ್ಮಶಾನದ ಹಾದಿ ನೋಡುವ ರೀತಿ ಮಾತನಾಡಿದ್ದಾರೆ.
ಈ ಎಲ್ಲದ ನಡುವೆ ಸರ್ಕಾರದ ಸಚಿವರು, ಶಾಸಕರ ನಡುವೆ ಸಮನ್ವಯ ಕೊರತೆ ಕಾಣುತ್ತಿದೆ. ಒಬ್ಬೊಬ್ಬರೂ ಒಂದೊಂದು ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಇಳಿ ವಯಸ್ಸಲ್ಲೂ ಯಡಿಯೂರಪ್ಪ ಮಾತ್ರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಕೇಂದ್ರದ ಸಹಕಾರ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಅವರ ಆಪ್ತರಿಂದಲೇ ವ್ಯಕ್ತವಾಗುತ್ತಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತ ಕಾಪಾಡಬೇಕಿದೆ ಎಂದು ಸ್ವಪಕ್ಷೀಯರೇ ಮಾತನಾಡಿಕೊಳ್ಳುತ್ತಿದ್ದಾರೆ.