ಧಾರವಾಡ: ಸೇವಾ ಹೀ ಸಂಘಟನಾ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಲು ರಾಜ್ಯ ಬಿಜೆಪಿ ಘಟಕ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 02 ರವರೆಗೆ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮಾಗಾಂಧಿ ಜಯಂತಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿ ವರ್ಷದಂತೆ ಸೇವಾ ಸಪ್ತಾಹದ ಮೂಲಕ ವಿವಿಧ ರೀತಿಯ ಸೇವಾ ಚಟುವಟಿಕೆ ಆಯೋಜಿಸಲಿದ್ದಾರೆ ಎಂದರು.
ನಡ್ಡಾ ಅವರ ನಿರ್ದೇಶನದಂತೆ ಸೆ.14 ರಿಂದ ಸೆ. 20 ರವರೆಗೆ ಪ್ರತಿ ಮಂಡಲಗಳಲ್ಲಿ 70 ಅಂಗವಿಕಲ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡುವುದು. 70 ಬಡ ಪುರುಷ ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳ ವಿತರಣೆ. ಕೋವಿಡ್- 19 ನಿಯಮಗಳನ್ನು ಪಾಲಿಸಿ ಪ್ರತಿ ಜಿಲ್ಲೆಯ 70 ಆಸ್ಪತ್ರೆ ಮತ್ತು ಕಾಲೋನಿಗಳಲ್ಲಿ ಹಣ್ಣು ಹಂಪಲುಗಳ ವಿತರಣೆ. ಸ್ಥಳೀಯ ಆವಶ್ಯಕತೆ ಅನುಗುಣವಾಗಿ ಆಸ್ಪತ್ರೆಯ ಮೂಲಕ ಕೊರೊನಾ ಪೀಡಿತರಾದ 70 ವ್ಯಕ್ತಿಗಳಿಗೆ ಪ್ಲಾಸ್ಮಾ ದಾನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಯುವಮೋರ್ಚಾದ ವತಿಯಿಂದ ರಾಜ್ಯದಲ್ಲಿ 70 ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 1 ರಕ್ತದಾನ ಶಿಬಿರ. ಪ್ರತಿ ಬೂತ್‍ನಲ್ಲಿ 70 ವೃಕ್ಷಾರೋಹಣ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪ. ಪ್ರತಿ ಜಿಲ್ಲೆಯ 70 ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದು. ಪ್ಲಾಸ್ಟಿಕ್ ನಿಷೇಧ ಕುರಿತು ಜನಜಾಗೃತಿ, ಜಿಲ್ಲಾ ಕೇಂದ್ರದ 70 ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿ ಮುಂತಾದ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದರು.