ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿಡಿ ವಿಚಾರದಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳದಿರುವ ಕಾಂಗ್ರೆಸ್ ಗೆಲುವು ವಿಧಾನಪರಿಷತ್ ನಲ್ಲಿ ಗದ್ದಲ ಕಾರಣವಾಯಿತು.
ಮಂಗಳವಾರ ಆರಂಭವಾದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಪ್ರಶ್ನೆ ಕೇಳಬೇಕಿತ್ತು. ಈ ವೇಳೆ ನೈತಿಕತೆಯ ಪ್ರಶ್ನೆ ಎತ್ತಿದ ರಮೇಶ್ ಪ್ರಶ್ನೆ ಕೇಳುವುದನ್ನು ಬಹಿಷ್ಕರಿಸಿದರು.
ಈ ನಡುವೆ ಗದ್ದಲ ತೀವ್ರಗೊಂಡಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಾರಲಿಲ್ಲ. ಆದ ಕಾರಣ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಪ್ರಶ್ನೋತ್ತರದ ನಡುವೆಯೇ ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ್ದರು.
ರಮೇಶ್ ಮಾತನಾಡುತ್ತಿದ್ದ ನಡುವೆಯೇ ಬಿಜೆಪಿ ಸದಸ್ಯರು ಉಪ ಪ್ರಶ್ನೆ ಕೇಳಲು ಅವಕಾಶ ಕೋರಿದರು. ಪೀಠದಲ್ಲಿದ್ದ ಉಪ ಸಭಾಪತಿ ಅವಕಾಶ ನೀಡಲು ಮುಂದಾದರು. ಅದಕ್ಕೆ ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್, ನಾರಾಯಣಸ್ವಾಮಿ, ಪ್ರತಾಪ್ ಚಂದ್ರ ಶೆಟ್ಟಿ, ಸಿಎಂ ಇಬ್ರಾಹಿಂ, ಶ್ರೀನಿವಾಸ ಮಾನೆ ಸೇರಿದಂತೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.
ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ ಆರಂಭವಾಯಿತು. ಗದ್ದಲದ ನಡುವೆಯೇ ಸಮಜಾಯಿಷಿ ನೀಡಲು ಯತ್ನಿಸಿದ ಸಚಿವ ಸೋಮಶೇಖರ್ ಸಿಡಿ ಇದೆ ಎಂದು ನಾವು ನ್ಯಾಯಾಲಯಕ್ಕೆ ಹೋಗಿಲ್ಲ ನಕಲಿ ಸಿಡಿ ತಯಾರಿಸಿ ತೇಜೋವಧೆ ಮಾಡಬಹುದೇ ಎಂಬ ಕಾರಣಕ್ಕೆ ಪ್ರತಿಬಂಧಕಾಜ್ಞೆ ತಂದಿದ್ದೇವೆ ಎಂದರು.
ಗದ್ದಲದ ನಡುವೆಯೇ ಉಪಸಭಾಪತಿ ಬಿಜೆಪಿಯ ಸುನಿಲ್ ಸುಬ್ರಮಣಿ ಅವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದರು. ನಂತರ ಜೆಡಿಎಸ್‌ನ ಕೆಟಿ ಶ್ರೀಕಂಠೇಗೌಡ ಪ್ರಶ್ನೆ ಕೇಳಬೇಕಿತ್ತು. ಗದ್ದಲ ಹೆಚ್ಚಾದ ಕಾರಣದಿಂದ 10 ನಿಮಿಷಗಳು ಮುಂದೂಡಿದ ಉಪಸಭಾಪತಿ, ಸಭಾನಾಯಕರು ಮತ್ತು ವಿಪಕ್ಷ ನಾಯಕರನ್ನು ಸಂಧಾನಕ್ಕಾಗಿ ತಮ್ಮ ಕೊಠಡಿಗೆ ಕರೆದರು.
ಒಟ್ಟಾರೆ ಇಂದಿನ ವಿಧಾನ ಮಂಡಲ ಕಲಾಪದಲ್ಲಿ ಸಿಡಿ ವಿಚಾರ ಏರು ಧ್ವನಿಯ ಗದಲ್ಲಕ್ಕೆ ಕಾರಣವಾಗಿದ್ದರಿಂದ ಗಲಾಪವನ್ನು 10 ನಿಮಿಷಗಳ ಕಾಲ ನುಂಗಿಹಾಕಿತು.