ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸುಮಾರು 650 ಕೋಟಿ ರೂ. ಮೌಲ್ಯದ ಜುನ್ನಸಂದ್ರ ಕೆರೆ ಜಮೀನನ್ನು ಜೋಡಿದಾರರಾಗಿದ್ದ ನಾರಾಯಣ ರೆಡ್ಡಿ ಕುಟುಂಬದವರ ಜೊತೆ ಸೇರಿಕೊಂಡು ಕಬಳಿಸಲು ಹುನ್ನಾರ ನಡೆಸುತ್ತಿದ್ದ ಸಚಿವ ಅರವಿಂದ ಲಿಂಬಾವಳಿ ಅವರ ಕರ್ಮಕಾಂಡವನ್ನು ಬಯಲಿಗೆಳೆದ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಬೆಳ್ಳಂದೂರು ವಾರ್ಡ್ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ಸೇರಿದಂತೆ ಇತರೇ ಮುಖಂಡರ ಮೇಲೆ ಗೂಂಡಾಗಳನ್ನು ಬಿಟ್ಟು ಹೆದರಿಸುವ ಪ್ರಯತ್ನ ನಡೆದಿದೆ.ಅಲ್ಲದೇ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರೇ ನೀವು ಎಷ್ಟೇ ಬೆದರಿಸಿದರು ಸಾರ್ವಜನಿಕ ಆಸ್ತಿಯನ್ನು ಉಳಿಸುವುದೇ ನಮ್ಮ ಗುರಿ. ಕೆರೆ ನಿಮ್ಮಂತಹ ಭೂಗಳ್ಳರ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಳ್ಳಂದೂರು ಪೊಲೀಸರು ಕೂಡ ಸಚಿವರ ಪರವಾಗಿ ಕೆಲಸ ಮಾಡುತ್ತಿದ್ದು ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈ ವಿಚಾರವಾಗಿ ಇಂದು ( ಮಾ.21) ಕೆರೆ ಅಂಗಳದಲ್ಲಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರ ನೇತೃತ್ವದಲ್ಲಿ “ಭೂಗಳ್ಳರಿಂದ ಕೆರೆ ಉಳಿಸಿ ಬೃಹತ್ ಪ್ರತಿಭಟನೆ” ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೆರೆ ಜಾಗ ಉಳಿಸಲು ಹೋದವರ ಮೇಲೆ ಕಲಂ 341, 504, 506 ರೆ/ವಿ 34 ಐಪಿಸಿ ಸೆಕ್ಷನ್ ನಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅರವಿಂದ ಲಿಂಬಾವಳಿ ಅವರೇ ಸರ್ಕಾರಿ ಜಾಗ ಉಳಿಸುವುದು ನಿಮ್ಮ ಪ್ರಕಾರ ಕ್ರಿಮಿನಲ್ ಕೆಲಸವೇ ಎಂದು ಪ್ರಶ್ನಿಸಿದರು.
ಸಚಿವರ ಅಕ್ರಮ ಹೊರಬರುತ್ತಿದ್ದಂತೆ ಸ್ಥಳೀಯ ಗೂಂಡಾಗಳನ್ನು ಬಿಟ್ಟು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನ ಹೆದರಿಸಲಾಗುತ್ತಿದೆ. ಅಲ್ಲದೇ ಪೊಲೀಸರು ಸಹ ಇವರ ಬೆನ್ನಿಗೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೂರು ನೀಡಿದವರ ಮೇಲೆ ಆಮ್ ಆದ್ಮಿ ಪಕ್ಷ ಪ್ರತಿದೂರು ನೀಡಿದ್ದು ಕೆರೆ ಜಾಗ ಉಳಿಸುವ ಹಾಗೂ ಸ್ವಚ್ಛಗೊಳಿಸುವ ತನಕ ಆಮ್ ಆದ್ಮಿ ಪಕ್ಷದ ಹೋರಾಟ ನಿರಂತರ ಎಂದು ಇದೇ ವೇಳೆ ಹೇಳಿದರು.