ವಿಜಯಪಥ ಸಮಗ್ರ ಸುದಿ
ಬೆಂಗಳೂರು: ಜಿಂದಾಲ್ ಕಂಪನಿಗೆ ಈಗಾಗಲೇ ಹಸ್ತಾಂತರ ಮಾಡಿದ್ದ ಜಮೀನನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ಎದ್ದಿದ್ದ ವಿರೋಧವನ್ನು ಶಮನಗೊಳಿಸಲಾಗುತ್ತಿದೆ.
ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬಳ್ಳಾರಿಯ ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಜಿಂದಾಲ್ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ 1078 ಕೋಟಿ ರೂ.ಗಳ ರಾಜಧನ ಬರಬೇಕಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೈಕೋರ್ಟ್, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು ರಾಜ್ಯ ಸರ್ಕಾರವು ಕೆಲವು ತಿಂಗಳುಗಳ ಹಿಂದಷ್ಟೇ ಹಸ್ತಾಂತರ ಮಾಡಿತ್ತು. ಸರ್ಕಾರಿ ಜಮೀನನ್ನು ಖಾಸಗಿ ಕಂಪನಿಗೆ ನೀಡಿರುವ ಕುರಿತು ಸಾಕಷ್ಟು ವಿರೋಧ ಕೇಳಿಬಂದಿತ್ತು.
ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಿರುವುದಕ್ಕೆ ಸ್ವಪಕ್ಷದ ಹಲವು ಶಾಸಕರೇ ವಿರೊಧ ವ್ಯಕ್ತಪಡಿಸಿದ್ದರು. ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ ಸೇರಿದಂತೆ ಅನೇಕ ಶಾಸಕರು ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಿರುವುದರಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದರು.