ಬೆಂಗಳೂರು: ಜುಲೈ 1 ರಿಂದ ಪೂರ್ವಾನ್ವಯ ಆಗುವಂತೆ ತುಟ್ಟಿಭತ್ಯೆಯನ್ನು ಶೇ. 3ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾರಿಗೆ ನೌಕರರ ಮೂಲ ವೇತನದ ಶೇ.21.50 ರಷ್ಟಿದ್ದ ತುಟ್ಟಿ ಭತ್ಯೆಯನ್ನು ಶೇ. 24.50ಗೆ ಏರಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸಾರಿಗೆ ನಿಗಮಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ಪಾವತಿಸಲು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಲ್ಕೂ ನಿಗಮಗಳಲ್ಲೂ ಅಕ್ಟೋಬರ್ ತಿಂಗಳ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.21.50 ರಿಂದ ಶೇ.24.50ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಿ ಪಾವತಿಸಲು ಆದೇಶಿಸಿದ್ದಾರೆ.
ಜುಲೈ 1ರಿಂದ ಸೆಪ್ಟೆಂಬರ್ -2021ರವರೆಗಿನ ಮೂರು ತಿಂಗಳ ತುಟ್ಟಿಭತ್ಯೆ ಹಿಂಬಾಕಿಯ ಒಂದೊಂದು ಕಂತನ್ನು ನವೆಂಬರ್-2021 ರಿಂದ ಜನವರಿ-2022ರ ತಿಂಗಳ ವೇತನದಲ್ಲಿ ಸೇರಿಸಿ ಪಾವತಿಸಲು ತಿಳಿಸಿದ್ದಾರೆ.
ಜುಲೈ-2021 ರಿಂದ ಸೆಪ್ಟೆಂಬರ್ 2021ರ ಅವಧಿಯಲ್ಲಿ ಸೇವಾವಿಮುಕ್ತಿ (ನಿವೃತ್ತಿ) ಹೊಂದಿದವರಿಗೆ ಲಭ್ಯವಿರುವ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ( ಸಂಸ್ಥೆಗೆ ಬರಬೇಕಾದ ಬಾಕಿ ಮೊತ್ತ ಇದ್ದಲ್ಲಿ ಕಡಿತ ಮಾಡಿಕೊಂಡು) ಧನಾದೇಶಗಳ ಮುಖಾಂತರ ನವೆಂಬರ್ 25ರಂದು ಪಾವತಿಸಬೇಕು ಎಂದು ತಿಳಿಸಿದ್ದಾರೆ.
ಅಕ್ಟೋಬರ್ ನಿಂಧ ಡಿಸೆಂಬರ್ ವರೆಗಿನ ತಿಂಗಳುಗಳಲ್ಲಿ ಸೇವಾವಿಮುಕ್ತಿ ಹೊಂದುವವರಿಗೆ ಬಾಕಿ ಇರುವ ಪೂರ್ಣ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ನಿವೃತ್ತಿ ತಿಂಗಳ ವೇತನದಲ್ಲೇ ಸೇರಿಸಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.