ಚಿತ್ರದುರ್ಗ: ಮೈಸೂರು ದಸರಾ ಹಬ್ಬ ಮುಗಿಯುವುದರೊಳಗೆ ಸಾರಿಗೆ ನೌಕರರಿಗೆ ಸಂಬಳ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಸಂಬಳ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನು ಒಂದು ತಿಂಗಳ ಸಂಬಳ ಬಾಕಿ ಇದ್ದು, ಹಬ್ಬದೊಳಗಡೆ ನೀಡೋಣ ಎಂದಿದ್ದಾರೆ. ಅವರು ನುಡಿದಂತೆ ನಡೆಯುತ್ತಾರೆ ಎಂದು ಹೇಳಿದರು.
ಕಳೆದ ಆಗಸ್ಟ್ ವೇತನದಲ್ಲಿ ಅರ್ಥ ಸಂಬಳವನ್ನು ಸೆಪ್ಟೆಂಬರ್ನಲ್ಲಿ ನೌಕರರಿಗೆ ನೀಡಲಾಗಿತ್ತು. ಬಳಿಕ ಅಕ್ಟೋಬರ್ 5ರ ನಂತರ ಉಳಿದರ್ಧ ವೇತನ ನೀಡಲಾಗಿದೆ. ಆದರೆ ಸೆಪ್ಟೆಂಬರ್ ತಿಂಗಳ ವೇತನ ಅಕ್ಟೋಬರ್ 10ರೊಳಗೆ ನೌಕರರಿಗೆ ಬಿಡುಗಡೆಯಾಗಬೇಕಿತ್ತು. ಅಕ್ಟೋಬರ್ 13ನೇ ತಾರೀಖಾದರೂ ಇನ್ನು ಬಿಡುಗಡೆ ಮಾಡಲಾಗಿಲ್ಲ.
ಇದರಿಂದ ನೌಕರರು ದುಡಿದರೂ ತಮ್ಮ ವೇತನ ಸಿಗದಿರುವುದರಿಂದ ದಸರಾ ಹಬ್ಬ ಆಚರಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾರೆ.