ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಸಿಟಿ ಸ್ಕ್ಯಾನ್ ದರವನ್ನು ಮತ್ತೆ ಹೆಚ್ಚಳ ಮಾಡಿದೆ. ಶುಕ್ರವಾರವಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿಸ್ಕ್ಯಾನ್ ದರವನ್ನು 1500ರೂ.ಗೆ ನಿಗದಿಪಡಿಸಿದ್ದ ಸರ್ಕಾರ, ಇದೀಗ ಖಾಸಗಿ ಆಸ್ಪತ್ರೆಗಳ ಒತ್ತಾಯದಿಂದ ಅದನ್ನು 2,500 ರೂ.ಗೆ ಏರಿಕೆ ಮಾಡುವ ಮೂಲಕ ಖಾಸಗಿಯವರ ಅಡಿಯಾಳಾಗಿ, ಜನ ಸಾಮಾನ್ಯರ ಉಸಿರನ್ನು ಇನ್ನಷ್ಟು ಕಟ್ಟಿಸುತ್ತಿದೆ.
ಕೊರೊನಾ ರೋಗಿಗಳಲ್ಲಿ ಶ್ವಾಸಕೋಶ ಸೋಂಕಿನ ಪ್ರಮಾಣ ತಿಳಿಯಲು ಸಿಟಿ ಸ್ಕ್ಯಾನ್ ಮತ್ತು ಎಕ್ಸ್ರೇ ಮಾಡಿಸಲಾಗುತ್ತದೆ. ಸಾಮಾನ್ಯ ಸಂದರ್ಭದಲ್ಲಿ 2 ಸಾವಿರ ರೂ.ನಿಂದ 3 ಸಾವಿರ ರೂ. ಇದ್ದ ದರ 6 ಸಾವಿರದಿಂದ 8 ಸಾವಿರ ರೂ.ಗೆ ಏರಿಕೆಯಾಗಿತ್ತು.
ಈ ರೀತಿ ಪ್ರಯೋಗಾಲಯಗಳು ಜನರನ್ನು ಶೋಷಣೆ ಮಾಡುತ್ತವೆ ಎಂಬ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ದರವನ್ನು 1500 ರೂ.ಗೆ ಇಳಿಕೆ ಮಾಡಲಾಗಿತ್ತು ಹಾಗೂ ಸಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಈಗ ಬಿಪಿಎಲ್ ಕಾರ್ಡ್ದಾರರಿಗೆ 1500ರೂ., ಎಪಿಎಲ್ ಕಾರ್ಡ್ ಹೊಂದಿರುವವರಿಗೆ 2,500 ರೂ.ಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಎದೆಯ ಡಿಜಿಟಲ್ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್ರೇಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಎಕ್ಸ್ರೇಗೆ ಗರಿಷ್ಠ 250ರೂ. ದರ ನಿಗದಿಪಡಿಸಲಾಗಿದೆ.
ಸರ್ಕಾರದ ಈ ರೀತಿಯ ಯಡವಟ್ಟು ನಿರ್ಧಾರದಿಂದ ಜನರು ಇನ್ನಷ್ಟು ಹೈರಾಣಾಗುತ್ತಿದ್ದು, ಹಿಡಿ ಶಾಪ ಹಾಕಿಕೊಂಡು, ಜೀವ ಕೈಯಲ್ಲಿ ಹಿಡಿದುಕೊಂಡು ಸಾಲಾಸೋಲ ಮಾಡಿ ಸಿಟಿ ಸ್ಕ್ಯಾನ್ ಮತ್ತು ಎಕ್ಸ್ರೇ ಮಾಡಿಸುತ್ತಿದ್ದಾರೆ.