ಬೆಂಗಳೂರು: ನಾಳೆಯಿಂದ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಸ್ಗಳನ್ನು ರಸ್ತೆಗಿಳಿಸಲು ನಾಲ್ಕೂ ಸಾರಿಗೆ ನಿಗಮಗಳು ಸಿದ್ದತೆ ನಡೆಸಿದ್ದು, ಮೊದಲ ಹಂತದಲ್ಲಿ 2 ಸಾವಿರ ಬಿಎಂಟಿಸಿ, 3 ಸಾವಿರ ಕೆಎಸ್‌ಆರ್‌ಟಿಸಿ, 2 ಸಾವಿರ ಎನ್‌ಇಕೆಆರ್‌ಟಿಸಿ ಮತ್ತು 1500 ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳು ಸೇವೆ ಒದಗಿಸಲಿವೆ.
ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಬಸ್‌ಗಳು ಸಂಚರಿಸಲಿದ್ದು, ಸಂಜೆ 7 ಗಂಟೆ ನಂತರ ಬಸ್ ಸಂಚಾರ ಇರುವುದಿಲ್ಲ. ಜತೆಗೆ ಬೆಳಗ್ಗೆ 6 ಗಂಟೆಗೂ ಮುನ್ನವೂ ಬಿಎಂಟಿಸಿ ಬಸ್ ಸಂಚರಿಸುವುದಿಲ್ಲ.
ಇನ್ನು ಬಿಎಂಟಿಸಿ ಸಿಬ್ಬಂದಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವಂತಿಲ್ಲ. ಪ್ರತಿ ಡಿಪೋದಲ್ಲೂ 5 ಹೆಚ್ಚುವರಿ ಬಸ್‌ಗಳು ಇರಬೇಕು. ಬಸ್‌ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿರಬೇಕು ಮತ್ತು ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಕೆಎಸ್‌ಆರ್‌ಟಿಸಿ ಮಾರ್ಗಸೂಚಿ
ನಾಳೆಯಿಂದ ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3 ಸಾವಿರ ಬಸ್‌ಗಳು ಸಂಚರಿಸಲಿವೆ.
ಪ್ರಯಾಣಿಕರು ಕೊವಿಡ್ 19 ತಡೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್‌ಆರ್‌ಟಿಸಿ ಸೂಚಿಸಿದೆ. ಆದರೆ ಅಂತಾರಾಜ್ಯಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸದ್ಯ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಅಂತಾರಾಜ್ಯ ಬಸ್ ಸಂಚಾರದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಎನ್‌ಇಕೆಆರ್‌ಟಿಸಿ ಮಾರ್ಗಸೂಚಿ
ಎನ್‌ಇಕೆಆರ್‌ಟಿಸಿ ಬಸ್ ಸೇವೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 2 ಸಾವಿರ ಬಸ್‌ಗಳು ಸಂಚರಿಸಲಿವೆ. ಅವುಗಳಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸಂಚರಿಸಲಿವೆ ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ.
ಎನ್‌ಡಬ್ಲ್ಯುಕೆಆರ್‌ಟಿಸಿ ಮಾರ್ಗಸೂಚಿ
ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ಸೇವೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 1500 ಬಸ್‌ಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಲಭ್ಯತೆ ಮೇರೆಗೆ ಹಂತಹಂತವಾಗಿ ಬಸ್ ಸಂಚರಿಸಲಿವೆ ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ.