ಗುಬ್ಬಿ: ಮೃತ ದೇಹ ಸಾಗಿಸಲು ಆಗಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿದ ಪಿಎಸ್ಐ ಬಳಿಕ ಕ್ಯಾಬ್ ಚಾಲಕನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಮೇಲೆ ಕೇಳಿ ಬಂದಿದೆ.
ಗುಬ್ಬಿಯ ಎಂ.ಎಚ್.ಪಟ್ಟಣದ ಬಳಿ ನಿನ್ನೆ ಅಪಘಾತವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜ್ಞಾನಮೂರ್ತಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಮೃತದೇಹವನ್ನು ಸಾಗಿಸಲು ಮುಂದಾದ ಎಸ್ಐ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುವ ಮ್ಯಾಕ್ಸಿ ಕ್ಯಾಬ್ನ ಚಾಲಕ ಶಕೀಲ್ನನ್ನು ತಡೆದು ಶವವನ್ನು ಸಾಗಿಸುವಂತೆ ತಿಳಿಸಿದ್ದಾರೆ.
ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಹೇಳಿದ್ದನ್ನು ಒಪ್ಪದ ಶಕೀಲ್, ಗಾಯಾಳು ಗಂಭೀರ ಸ್ಥಿತಿಯಲ್ಲಿ ಇದ್ದಿದರೆ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದೆ. ಆದರೆ, ಶವವನ್ನು ನಾನು ಸಾಗಿಸುವುದಕ್ಕೆ ಆಗಲ್ಲ ಎಂದಿದ್ದಾರೆ.
ಕೂಡಲೇ ದರ್ಪ ತೋರಿದ ಎಸ್ಐ ಜ್ಞಾನಮೂರ್ತಿ ಮ್ಯಾಕ್ಸಿ ಕ್ಯಾಬ್ ಅನ್ನು ವಶಕ್ಕೆ ಪಡೆದು ಇಲ್ಲಸಲ್ಲದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ವಾಹನವನ್ನು ಬಿಡಬೇಕು ಅಂದರೆ ನೂರು ರೂ. ರಶೀದಿ ಪಡೆದು 7 ಸಾವಿರ ರೂ.ಗಳನ್ನು ನನ್ನ ಡ್ರೈವರ್ ಖಾತೆಗೆ ಜಮಾ ಮಾಡು ಎಂದು ಹೇಳಿದ್ದಾರೆ ಎಂದು ಚಾಲಕ ಶಕೀಲ್ ಆರೋಪಿಸಿದ್ದಾರೆ.
ಬೇರೆ ದಾರಿ ಇಲ್ಲದೇ ನನ್ನ ಅಕೌಂಟ್ನಿಂದ ಜೀಪ್ ಡ್ರೈವರ್‌ಗೆ ಹಣ ಸಂದಾಯ ಮಾಡಿದ್ದೇನೆ. ಹಣ ಸಂದಾಯ ಆದ್ರೂ ಕ್ಯಾಬ್ ರಿಲೀಸ್ ಮಾಡದ ಎಸ್ಐ ಸಂಜೆ ವರೆಗೆ ವಾಹನ ಬಿಡದೇ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಈ ಘಟನೆ ಖಂಡಿಸಿದ ಕ್ಯಾಬ್ ಚಾಲಕರು ಗುಬ್ಬಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಎಸ್ಐ ಜ್ಞಾನಮೂರ್ತಿ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನೂ ಇದೇ ಎಸ್ಐ ವಿರುದ್ಧ ಈ ರೀತಿಯ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಸಾರ್ವಜನಿಕರು ಎಸ್ಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ ಎನ್ನುವುದು ಈ ವೇಳೆ ತಿಳಿದುಬಂದಿದೆ.
ಒಂದು ವೇಳೆ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿ ಲಂಚ ಪಡೆದಿರುವುದು ಸಾಬೀತಾದರೆ ಅಂಥ ಲಂಚಕೋರ ಅಧಿಕಾರಿಯನ್ನು ಒಂದು ಕ್ಷಣವು ಇಟ್ಟುಕೊಳ್ಳದೆ ವಜಾ ಮಾಡಬೇಕು. ಇಲ್ಲ ಸುಖಸುಮ್ಮನೆ ಆರೋಪ ಮಾಡಿದ್ದರೆ ಅಂಥವರಿಗೂ ಕಾನೂನಿನಡಿ ತಕ್ಕ ಪಾಠ ಕಲಿಸಬೇಕು.
ಅದಕ್ಕೆ ಪಿಎಸ್ಐ ಕ್ಯಾಬ್ ಚಾಲಕನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದಾನೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.