ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ (ಅಕ್ಟೋಬರ್ 27) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಆದರೆ, ಈ ಹಿಂದೆ ನಿಗದಿಯಾಗಿದ್ದ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ಕೆಲ ಕಾನೂನು ತೊಡಕುಗಳುಂಟಾದ ಕಾರಣ ನಾಳೆಯಿಂದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಎಚ್.ಡಿ.ರೇವಪ್ಪ, ಉಪಾಧ್ಯಕ್ಷರಾದ ನಾಗರಾಜ್ ಎಂ. ಡಾ. ಪ್ರಕಾಶ್ ಕೆ., ಪ್ರ.ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಸೇರಿದಂತೆ ಫೆಡರೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 2021ರ ಮುಷ್ಕರದ ವೇಳೆ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡಬೇಕು. ವರ್ಗಾವಣೆ ಮಾಡಿರುವ ಎಲ್ಲಾ ಕಾರ್ಮಿಕರನ್ನು ವಾಪಸ್ಸು ತರಬೇಕು. ಅಮಾನತು ತೆರವು ಮಾಡಿ ಎಲ್ಲಾ ಶಿಸ್ತು ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಪ್ರ.ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಇನ್ನು ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಅವಧಿಯ ಗೈರು ಹಾಜರಿಗೆ ವಿಧಿಸುತ್ತಿರುವ ಶಿಕ್ಷೆಗಳನ್ನು ರದ್ದುಗೊಳಿಸಿ. ಸುಳ್ಳು ಪೊಲೀಸ್ ಮೊಕದ್ದಮೆಗಳನ್ನು ವಾಪಸ್ಸು ಪಡೆಯಿರಿ. ನಿಗದಿತ ದಿನಾಂಕದಲ್ಲಿ ಪೂರ್ಣ ವೇತನ ನೀಡಿ. ಅನ್ಯಾಯ ಮತ್ತು ದೌರ್ಜನ್ಯದ ಆಡಳಿತವನ್ನು ನಿಲ್ಲಿಸಿ. ಕಿರುಕುಳಗಳನ್ನು ತಪ್ಪಿಸಿ ಎಂದು ಆಗ್ರಹಿಸಿ ಈ ಧರಣಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಾರಿಗೆ ನಿಗಮಗಳು ಈ ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ಸಂಸ್ಥೆಗಳಾಗಿದ್ದು, ಈ ಉದ್ದೇಶ ಸಫಲವಾಗಬೇಕಾದರೆ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಇರಬೇಕು. ಸಂಸ್ಥೆಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತ ಇದ್ದು, ಉತ್ತಮ ಕೈಗಾರಿಕಾ ಬಾಂಧವ್ಯ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ಈಡೇರಲು ಸಾಧ್ಯ ಎಂದು ತಿಳಿಸಿದ್ದಾರೆ.
ಮುಷ್ಕರದ ಅವಧಿಯನ್ನು ಗೈರು-ಹಾಜರಿ ಎಂದು ಪರಿಗಣಿಸಿ 2000 ರಿಂದ ರೂ.10,000 ರೂ.ಗಳವರೆಗೆ ಹತ್ತಾರು ಸಾವಿರ ಕಾರ್ಮಿಕರಿಗೆ ದಂಡ ವಿಧಿಸುವುದು, ಮೇ-ಜೂನ್ ತಿಂಗಳು 2021 ನಿವೃತಿಯಾದ ಕಾರ್ಮಿಕರಿಗೆ 5 ಇಂಕ್ರಿಮೆಂಟ್ ಕಡಿತ ಮಾಡಲಾಗಿದೆ. ದೌರ್ಜನ್ಯ ಹಾಗೂ ಕಿರುಕುಳಗಳು ದಿನೇ ದಿನೇ ಹೆಚ್ಚಳವಾಗುತ್ತಲೇ ಇವೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಫೆಡರೇಷನ್ ವತಿಯಿಂದ ಸೆ.20 ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಚಿವರು ವಿಧಾನಸಭೆ ಅಧಿವೇಶನದಲ್ಲಿಯೂ ಸಹ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದರು. ಸಾರಿಗೆ ನಿಗಮಗಳ ಕಾರ್ಮಿಕರು ಸಚಿವರ ಹೇಳಿಕೆಯಿಂದ ಸಂಭ್ರಮಗೊAಡರು. ಆದರೆ ಬಿಎಂಟಿಸಿ ಆಡಳಿತವರ್ಗ ಈ ನಡುವೆಯೇ ಪುನಃ 57 ಕಾರ್ಮಿಕರನ್ನು ಸೆ. 27 ರಂದು ವಜಾಗೊಳಿಸಿತು ಎಂದು ಕಿಡಿಕಾರಿದ್ದಾರೆ.
ಈಗಾಗಲೇ 6 ತಿಂಗಳು ಕಳೆದರೂ ಸಹ ಸೇವೆಯಿಂದ ವಜಾ ಮಾಡಿದ ಕಾರ್ಮಿಕರನ್ನು ಪುನರ್ ನೇಮಕ ಮಾಡಿರುವುದಿಲ್ಲ ಹಾಗೂ ಇನ್ನಿತರೆ ಸೇಡಿನ ಕ್ರಮಗಳನ್ನು ವಾಪಸ್ಸು ಪಡೆದಿರುವುದಿಲ್ಲ. ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಹಲವು ಬಾರಿ ಬಹಿರಂಗವಾಗಿ ಮತ್ತು ಕಾರ್ಮಿಕ ಸಂಘಗಳ ಮುಖಂಡರ ಸಮ್ಮುಖದಲ್ಲೇ ತಿಳಿಸಿದ್ದಾರೆ. ಆದರೂ ಸೇವೆಯಿಂದ ವಜಾ ಆದವರಿಗೆ ಪುನರ್ ನೇಮಕ ಆದೇಶ ನೀಡಿಲ್ಲ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ.