ಮಹದೇಶ್ವರಬೆಟ್ಟ : ಅನ್‌ಲಾಕ್ ಜಾರಿಯಾದ ಹಿನ್ನೆಲೆಯಲ್ಲಿ ದೇವಾಲಯಗಳು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಚಾಮರಾಜನಗರ ಜಿಲ್ಲೆಯ ಹನೂರಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರು ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದರು.
ಮಲೈಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈ ಕುರಿತು ಮಾತನಾಡಿ, ಕೋವಿಡ್ ಮಾರ್ಗಸೂಚಿಗಳ ಅನುಸಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಬಳಿ ಇರುವ ರಂಗಮಂದಿರದಲ್ಲಿ ಸಾರ್ವಜನಿಕರು ಕೂರಲು ನಿಗದಿತ ಅಂತರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇನ್ನು ಸಾಲಿನಲ್ಲಿ ನಿಂತು ದೇವಸ್ಥಾನದ ಒಳಹೋಗಲು ಅವಕಾಶ ಇದೆ. ಪ್ರವೇಶ ದ್ವಾರದಲ್ಲೇ ಜನರಿಗೆ ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. ದಾಸೋಹ, ತೀರ್ಥ ಪ್ರಸಾದ, ಲಾಡು ಪ್ರಸಾದ, ಸೇವೆಗಳು, ಉತ್ಸವಗಳಿಗೆ ಅವಕಾಶ ಕಲ್ಪಿಸಿಲ್ಲ. ಮುಡಿ ಸೇವೆ ಮಾಡಿಸುವಂತಿಲ್ಲ. ಬೆಟ್ಟದ ವಸತಿ ಗೃಹಗಳಲ್ಲಿ ತಂಗಲು ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.