ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನೌಕರರ ಜೀವ ವಿಮಾ ಪಾಲಿಸಿಗೆ (ಎಲ್‌ಐಸಿ) ಕಳೆದ 2020 ನವೆಂಬರ್‌ನಿಂದ ಹಣ ತುಂಬದೆ ಹಲವು ನೌಕರರ ಪಾಲಿಸಿಗಳು ಲ್ಯಾಪ್ಸ್ ಆಗಿವೆ ಇನ್ನು ಕೆಲವು ಪಾಲಿಸಿಗಳು ಲ್ಯಾಪ್ಸ್ ಆಗುವ ಹಂತದಲ್ಲಿವೆ.
ಎಲ್‌ಐಸಿಗೆ ಹಣ ತುಂಬಲು ನೌಕರರ ವೇತನದಲ್ಲಿ ಕಟಾವು ಮಾಡಿಕೊಂಡಿರುವ ಸಾರಿಗೆ ನಿಗಮಗಳು 10-11 ತಿಂಗಳಿನಿಂದ ಎಲ್‌ಐಸಿ ಪಾಲಿಸಿಗೆ ಹಣ ತುಂಬದೆ ಬಾಕಿ ಉಳಿಸಿಕೊಂಡಿವೆ. ಆದರೆ ನೌಕರರ ವೇತನದಲ್ಲಿ ಪ್ರತಿ ತಿಂಗಳು ಕಟಾವು ಮಾಡಿಕೊಂಡಿವೆ. ಇದರಿಂದ ನೌಕರರ ಎಲ್‌ಐಸಿ ಪಾಲಿಸಿಗಳು ಲ್ಯಾಪ್ಸ್ ಆಗುತ್ತಿದ್ದು, ನೌಕರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಎನ್‌ಡಬ್ಲ್ಯುಕೆಆರ್‌ಟಿಸಿ ಹಾವೇರಿ ವಿಭಾಗದ ಡಿಸಿಯಿಂದ ನೌಕರರಿಗೆ ಕಿರುಕುಳ: ಎಲ್‌ಐಸಿ ಪಾಲಿಸಿಗಳ ಸಂಬಂಧ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮದ ಹಾವೇರಿ ವಿಭಾಗದ ನಿಯಂತ್ರಣಾಧಿಕಾರಿ ಜಗದೀಶ್ ನಾಯಕ್ ಅವರು ಮೌಖಿಕವಾಗಿ ಒಂದು ಆದೇಶವನ್ನೇ ಹೊರಡಿಸಿದ್ದು, ನಾವು ನಿಮ್ಮ ಎಲ್‌ಐಸಿ ಪಾಲಿಸಿಗಳಿಗೆ ಹಣ ತುಂಬಲು ಆಗುತ್ತಿಲ್ಲ.
ಕಾರಣ ನಮ್ಮ ನಿಗಮದಲ್ಲಿ ಹಣವಿಲ್ಲ ಹೀಗಾಗಿ ನೀವೇ ಹಣ ತುಂಬಿಕೊಳ್ಳಬೇಕು ಎಂದು ಬಲವಂತವಾಗಿ, ನಾವೇ ಹಣ ತುಂಬಿಕೊಳ್ಳುತ್ತೇವೆ ಎಂದು ನೌಕರರಿಂದ ಪತ್ರ ಬರೆಸಿಕೊಂಡು ಸಹಿ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಅದಕ್ಕೆ ನೌಕರರು ಸರಿ ನಾವೇ ಇನ್ನು ಮುಂದೆ ನಮ್ಮ ಎಲ್‌ಐಸಿ ಪಾಲಿಸಿಗೆ ಹಣ ತುಂಬಿಕೊಳ್ಳುತ್ತೇವೆ. ನೀವು ಈವರೆಗೆ ವೇತನದಲ್ಲಿ ಕಟಾವೂ ಮಾಡಿರುವ ಹಣವನ್ನು ತುಂಬಿ ನಮ್ಮ ಎಲ್‌ಐಸಿ ಪಾಲಿಸಿಯು ಲ್ಯಾಪ್ಸ್ ಆಗಿಲ್ಲ ಎಂಬುದನ್ನು ಖಚಿತಪಡಿಸಿ ಎಂದು ಕೇಳುತ್ತಿದ್ದಾರೆ.
ಈ ರೀತಿ ಖಚಿತ ಪಡಿಸಿ ಎಂದು ಕೇಳುತ್ತಿರುವ ನೌಕರರಿಗೆ ಡ್ಯೂಟಿ ಕೊಡದೆ ಅವರನ್ನು ನಿಂದಿಸುವ ಕೆಲಸವನ್ನು ಡಿಸಿ ಜಗದೀಶ್ ನಾಯಕ್ ಮಾಡುತ್ತಿದ್ದಾರೆ. ಅಲ್ಲದೆ ನಿಮ್ಮ ವೇತನದಲ್ಲಿ ಎಲ್‌ಐಸಿ ಪಾಲಿಸಿಗೆ ಎಂದು ಕಟಾವು ಮಾಡಿಕೊಂಡಿರುವ ಹಣವನ್ನು ನಿಗಮ ಆರ್ಥಿಕವಾಗಿ ವೃದ್ಧಿಯಾದ ಮೇಲೆ ಚೆಕ್ ಮೂಲಕ ಕೊಡುತ್ತೇವೆ ಎಂದು ಗದರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ಇನ್ನು ಡಿಸಿ ಜಗದೀಶ್ ಅವರ ಭಯಕ್ಕೆ ಈಗಾಗಲೇ ಹಾವೇರಿ ವಿಭಾಗದ ಶೇ.70ರಷ್ಟು ಎಲ್‌ಐಸಿ ಪಾಲಿಸಿ ಹೊಂದಿರುವ ನೌಕರರು ನಾವೇ ಎಲ್‌ಐಸಿ ಪಾಲಿಸಿಗೆ ಹಣ ತುಂಬಿಕೊಳ್ಳುತ್ತೇವೆ ಎಂದು ಈಗಾಗಲೇ ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನೌಕರರು ದುಡಿದ ಹಣವನ್ನು ಎಲ್‌ಐಸಿ ಪಾಲಿಸಿಗೆ ತುಂಬುವುದಕ್ಕೆ ಕಟಾವು ಮಾಡಿಕೊಂಡಿರುವ ನಿಗಮಗಳು ಅವುಗಳನ್ನು ತುಂಬದೆ ನಿರ್ಲಕ್ಷ್ಯ ವಹಿಸಿದ್ದು, ಈಗ ನೌಕರರನ್ನೇ ಹೆದುರಿಸುವ ಮೂಲಕ ಮತ್ತೊಂದು ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುತ್ತಿದೆ.
8.25 ಕೋಟಿ ರೂ. ಬಾಕಿ ಉಳಿಸಿಕೊಂಡ ಬಿಎಂಟಿಸಿ: ಇನ್ನು 2021 ಮತ್ತು 22ನೇ ಸಾಲಿನಲ್ಲಿ ಬಿಎಂಟಿಸಿ 8.25 ಕೋಟಿ ರೂ.ಗಳನ್ನು ನೌಕರರ ಎಲ್‌ಐಸಿ ಪಾಲಿಸಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಆದರೆ, ನೌಕರರಿಗೆ ನೀವೆ ಆ ಹಣ ಕಟ್ಟಬೇಕು ಎಂದು ಹೇಳಿಲ್ಲ.
ಇದೇ ರೀತಿ ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಲ್ಲೂ ಎಲ್‌ಐಸಿ ಪಾಲಿಸಿಯನ್ನು ಕಳೆದ 10-11ತಿಂಗಳುಗಳಿಂದ ಬಾಕಿ ಉಳಿಸಿಕೊಳ್ಳಲಾಗಿದ್ದು, ಇದರಿಂದ ನೌಕರರಿಗೆ ಕೊನೆಯಲ್ಲಿ ಸಿಗಬೇಕಿರುವ ಮೊತ್ತ ಸರಿಯಾಗಿ ಸಿಗದೆ ಯಾರೋ ಮಾಡಿದ ತಪ್ಪಿಗೆ ನೌಕರರು ಕಡಿಮೆ ಹಣ ಪಡೆಯುವಂತಾಗುತ್ತಿದೆ.
ಆದರೆ, ಈ ನೌಕರರು ತಮ್ಮ ವೇತನದಲ್ಲಿ ನಿಗಮಗಳು ಎಲ್‌ಐಸಿ ಪಾಲಿಸಿಗೆಂದು ಹಣ ಕಟಾವು ಮಾಡಿಕೊಂಡು ಕಟ್ಟದಿದ್ದರೆ ಅದನ್ನು ಪಾಲಿಸಿದಾರರಿಗೆ ಎಲ್‌ಐಸಿ ಮೂಲಕವೇ ಬರಿಬೇಕಾಗುತ್ತದೆ. ಹೀಗಾಗಿ ನೌಕರರು ಭಯಪಡುವ ಅಗತ್ಯವಿಲ್ಲ ಎಂದು ಎಲ್‌ಐಸಿ ಏಜೆಂಟರೊಬ್ಬರು ತಿಳಿಸಿದ್ದಾರೆ.