ಬೆಂಗಳೂರು/ಸಿಂಧಗಿ: ಸಾರಿಗೆ ನಿಗಮಗಳಲ್ಲಿ ಕೆಲ ಅಧಿಕಾರಿಗಳ ದುರ್ನಡತೆ ಎಲ್ಲೆ ಮೀರುತ್ತಿದ್ದು, ಇದರಿಂದ ನೌಕರರ ಪ್ರಾಣಪಕ್ಷಿಯೇ ಹಾರಿ ಹೋಗುತ್ತಿದೆ. ಆದರೂ ಅಧಿಕಾರಿಗಳಿಗೆ ಕಾನೂನಿನಡಿ ಯಾವುದೇ ಶಿಕ್ಷೆ ಆಗದೆ ಅವರು ಇನ್ನಷ್ಟು ನೌಕರರ ಜೀವ ತೆಗೆದುಕೊಳ್ಳಲು ಅಣಿಯಾಗುತ್ತಿದ್ದಾರೆ.
ಇಂಥ ಪರಿಸ್ಥಿತಿ ಇದ್ದರೂ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಈ ಸಾರಿಗೆ ನಿಗಮಗಳಿಗೂ ನಮಗೂ ಸಂಬಂಧವೆ ಇಲ್ಲ ಎಂಬಂತೆ ವರ್ತಿಸುತ್ತಿರುವುದಕ್ಕೆ ಇಡೀ ರಾಜ್ಯದ ಜನತೆ ತಲೆ ತಗ್ಗಿಸಲೇ ಬೇಕು. ಕಾರಣ ಇಂಥ ಕೀಳು ಮಟ್ಟದ ರಾಜಕಾರಣಕ್ಕೆ ನಾವು ಬೆಂಬಲಿಸಿದ್ದೇವಲ್ಲ ಎಂದು.
ಹೌದುರೀ ಎಂಥ ಸರ್ಕಾರ ರಾಜ್ಯದಲ್ಲಿ ಇದೆ ಎಂದರೆ ಮನುಷ್ಯತ್ವವನ್ನೇ ಮರೆತ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿದ್ದು, ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನು ತುಚ್ಯವಾಗಿ ಕಾಣುತ್ತಾ ಅವರ ಜೀವವನ್ನೇ ತೆಗೆದುಕೊಳ್ಳವ ಮಟ್ಟಕ್ಕೆ ಹೋಗುತ್ತಿದೆ.
ಇದನ್ನು ನೋಡುತ್ತಿದ್ದರೆ ನಾವು ರಾಮನ ರಾಜ್ಯದಲ್ಲಿದ್ದೇವೋ ಇಲ್ಲ ರಾವಣ ರಾಜ್ಯದಲ್ಲಿದ್ದೇವೆ ಎಂಬ ಭಯ ಕಾಡುತ್ತಿದೆ. ಒಂದು ಕಡೆ ನಿಗಮಗಳಲ್ಲಿ ವೇತನ ನೀಡುತ್ತಿಲ್ಲ. ಇನ್ನೊಂದು ಕಡೆ ಮೇಲಧಿಕಾರಿಗಳು ಸಾರಿಗೆ ನೌಕರರಿಗೆ ಮನಬಂದಂತೆ ದಂಡ ವಿಧಿಸುತ್ತಿದ್ದಾರೆ. ಜತೆಗೆ ಡಿಪೋದಿಂದ ಡಿಪೋಗಳಿಗೆ ವರ್ಗಾವಾಣೆ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ.
ಈ ಕೆಲ ಅಧಿಕಾರಿಗಳ ಕಿರುಕುಳದಿಂದ ಜೀವನದಲ್ಲಿ ಬೇಸತ್ತ ಅದೆಷ್ಟೋ ನೌಕರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದು ಕೂಡ ತಾವು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕಿರುಕುಳ ಕೊಟ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಅವರ ಮೇಲಧಿಕಾರಿಗಳು ಮತ್ತು ಸರ್ಕಾರ ಕೆಟ್ಟ, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡಿನ ಸಂಗತಿ.
ನೋಡಿ ನಿನ್ನೆ ಮೇಲಧಿಕಾರಿಗಳ ಕಿರುಕುಳಕ್ಕೆ ಬಿಎಂಟಿಸಿ ಕಾರ್ಮಿಕ ಬಲಿಯಾಗಿದ್ದಾನೆ. ಸಿಂಧಗಿ ಮೂಲದ 41ನೇ ಡಿಪೋನ ಚಾಲಕ ಜಟ್ಟೆಪ್ಪ ಪಟೇದ ಮೇಲಧಿಕಾರಿಗಳ ಕಿರುಕುಳ ತಡೆಯಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಜೂರು ಡಿಪೋ 41 ರಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಜಟ್ಟೆಪ್ಪ ಪಟೇದ ಆರೋಪಿಸಿರುವಂತೆ ತನಗೆ ಡಿಪೋ ಮ್ಯಾನೇಜರ್ ಹಾಗೂ ಡಿಸಿ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದರು. ಅನೇಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಡಿಪೋದಿಂದ ಡಿಪೋಗೆ ಬೇಕಂತಲೇ ವರ್ಗಾವಣೆ ಮಾಡುವ ಮೂಲಕ ಗೋಳೋಯ್ದುಕೊಳ್ಳುತ್ತಿದ್ದರು. ಅನೇಕ ಬಾರಿ ಕ್ಷಮೆ ಯಾಚಿಸಿದ್ರೂ ಅದೇ ಕಿರುಕುಳ ಮುಂದುವರಿಸಿದ್ದರು.
ಮೇಲಧಿಕಾರಿಗಳ ಈ ಕಿರುಕುಳದಿಂದ ಅಕ್ಷರಶಃ ಬೇಸತ್ತು ಆತ್ಮಹತ್ಯೆ ನಿರ್ಧಾರ ಮಾಡಿಕೊಂಡಿದ್ದು, ಬಾರದ ಊರಿಗೆ ಪ್ರಯಾಣ ಬೆಳೆಸುತ್ತಿದ್ದೇನೆ ಸ್ನೇಹಿತರೆ. ಈ ವಿಷಯವನ್ನು ಎಲ್ಲರಿಗೂ ನಮ್ಮ ಮೇಲಧಿಕಾರಿಗಳು ಮತ್ತು ಸರ್ಕಾರಕ್ಕೆ ಮುಟ್ಟುವರೆಗೆ ಫಾರ್ವರ್ಡ್ ಮಾಡಿ ಎಂದು ಅಳುತ್ತಲೇ ಹೇಳುತ್ತಿರುವ ಆಡಿಯೋ ಎಂಥ ಕಲ್ಲು ಹೃದಯವನ್ನು ಕರಿಗಿಸುವಂತಿದೆ.
ಚಾಲಕ ಪಟೇದ ಅವರು ರಜೆ ಮೇಲೆ ತನ್ನ ಸ್ವಂತೂರಾದ ಸಿಂಧಗಿಗೆ ತೆರಳಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಸತ್ತ ನಂತರ ತನಗೆ ಬರಬೇಕಾದ ಎಲ್ಲ ಸವಲತ್ತುಗಳನ್ನು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ನೀಡಿ ಎಂದು ಆಡಿಯೋದಲ್ಲಿ ಉಲ್ಲೇಖಿಸಿರುವ ಜಟ್ಟೆಪ್ಪ,ಮೇಲಧಿಕಾರಿಗಳ ಕಿರುಕುಳವಾದ್ರೆ ಧೃತಿಗೆಡಬೇಡಿ, ಧೈರ್ಯವಾಗಿ ಎದುರಿಸಿ ಸ್ನೇಹಿತರೇ..ನಾನು ಹೋಗಿ ಬರುತ್ತೇನೆಂದು ಹೇಳಿದ್ದಾರೆ.
ಜಟ್ಟೆಪ್ಪನ ಆತ್ಮಹತ್ಯೆಯಿಂದ ಸಾರಿಗೆ ನಿಗಮಗಳ ಕಾರ್ಮಿಕರಲ್ಲಿ ಆತಂಕ ಹೆಚ್ಚಿದೆ. ಮೇಲಧಿಕಾರಿಗಳ ಕಿರುಕುಳ ದಿನೇದಿನೇ ಡಿಪೋಗಳಲ್ಲಿ ಹೆಚ್ಚುತ್ತಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.. ಒಂದೆಡೆ ಕೆಲಸ ಕಳೆದುಕೊಂಡ ನೋವು. ಇನ್ನೊಂದೆಡೆ ತಿಂಗಳುಗಟ್ಟಲೇ ಸಂಬಳವಿಲ್ಲದೆ ಬದುಕು ನಡೆಸೋದು ದುಸ್ತರವಾಗಿರುವುದರಿಂದ ತೀವ್ರ ನೊಂದಿರುವ ಕಾರ್ಮಿಕರ ನೆರವಿಗೆ ಸಚಿವ ಶ್ರೀರಾಮುಲು ಧಾವಿಸದಿದ್ದರೆ ಜಟ್ಟೆಪ್ಪನಂತೆ ಇನ್ನಷ್ಟು ಕಾರ್ಮಿಕರು ಆತ್ಮಹತ್ಯೆ ಹಾದಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ..
ಇನ್ನಾದರೂ ಸರ್ಕಾರ ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಜತೆಗೆ ಸಚಿವ ಶ್ರೀರಾಮುಲು ಅವರು ಇಂಥ ನೀಚ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕಿದೆ. ಇಲ್ಲದಿದ್ದರೆ ನಿಗಮಗಳಲ್ಲಿ ಇನ್ನೆಷ್ಟು ನೌಕರರ ಪ್ರಾಣ ತೆಗೆಯುವರೋ ಈ ಅಧಿಕಾರಿಗಳು ಗೊತ್ತಿಲ್ಲ.
ಇದಕ್ಕೂ ಮುನ್ನ ಎಚ್ಚೆತ್ತರೆ ನೌಕರರ ಪ್ರಾಣ ಉಳಿಸುವ ಜತೆಗೆ ಸರ್ಕಾರಕ್ಕೂ ಮುಂದೆ ಆಗುವ ಅವಮಾನ, ನಷ್ಟವನ್ನು ತಪ್ಪಿಸಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವೆ ಪಾಠ ಕಲಿಯುತ್ತೀರಿ, ನೋಡಿ ಎಲ್ಲವೂ ಈಗ ನಿಮ್ಮ ಕೈಯಲ್ಲೇ ಇದೆ…