ಮೈಸೂರು: ದಲಿತ ಸಮುದಾಯಕ್ಕೆ ಸೇರಿದ್ದರೂ ದಲಿತರ ನ್ಯಾಯಬದ್ಧ ಅವಕಾಶಗಳನ್ನು ಕಸಿದುಕೊಳ್ಳುತ್ತಿರುವ ಬಗ್ಗೆ ತುಟಿಕ್- ಪಿಟಿಕ್ ಎನ್ನದ ಸಚಿವರಾದ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಅವರು ಸಿದ್ದರಾಮಯ್ಯ ಅವರ ಮಾತನ್ನು ತಿರುಚಿ ಅಪಪ್ರಚಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ ಎಂದು ಲೋಕೋಪಯೋಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಸಿಕ್ಕಾಗ ದಲಿತರ ಪರವಾಗಿ ಅತಿ ಹೆಚ್ಚಿನ ಕೆಲಸ ಮಾಡಿದ ಸಿದ್ದರಾಮಯ್ಯ ಅವರು ಒಬ್ಬ ನಿಜವಾದ ಅಂಬೇಡ್ಕರ್ ವಾದಿ. ದಲಿತರಿಗೆ ಎಸ್ಸಿಪಿ/ ಟಿಎಸ್ಪಿ ಕಾಯ್ದೆ, ಜಾರಿಗೊಳಿಸಿ, ಗುತ್ತಿಗೆ ಮೀಸಲಾತಿ, ಬಡ್ತಿ ಮೀಸಲಾತಿ, ಕಲ್ಲು ಗಣಿಗಾರಿಕೆಯಲ್ಲಿ ಮೀಸಲಾತಿ ಹಾಗೂ ಕೈಗಾರಿಕೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದರು.
ಅಲ್ಲದೆ ಅದಕ್ಕಾಗಿ 30 ಸಾವಿರ ಕೋಟಿ ರೂ.ಗಳ ಅನುದಾನವನ್ನೂ ಮೀಸಲಿಟ್ಟಿದ್ದರು. ಬಹುಶಃ ಈಗ ದೊಡ್ಡದಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯ ಯಾವ ನಾಯಕರೂ ಕೂಡಾ ಸಿದ್ದರಾಮಯ್ಯನವರ ರೀತಿ ತಮ್ಮ ರಾಜಕೀಯ ಇತಿಹಾಸದಲ್ಲಿ ದಲಿತರ ಪರವಾದ ಕಾರ್ಯಕ್ರಮ ರೂಪಿಸುವುದಿರಲಿ ಹಾಗೆ ಯೋಚಿಸಲೂ ಸಾಧ್ಯವಿಲ್ಲ ಎಂದು ಹರಿಹಾಯ್ದರು.
ದಲಿತರಾಗಿದ್ದರೂ ಪ.ಜಾತಿ ಮತ್ತು ಪಂಗಡ ಕಾಯ್ದೆಯ ಹಣವನ್ನು ಕಡಿತಗೊಳಿಸಿ, ಕೋಮುವಾದಿ ಪಾಳಯಕ್ಕೆ ಸೇರಿ, ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾರಜೋಳ, ಜಿಗಜಿಣಗಿ ಹಾಗೂ ನಾರಾಯಣಸ್ವಾಮಿ ಅವರಿಗೆ ನಾಚಿಕೆಯಾಗಬೇಕು ಎಂದು ಚಾಟಿ ಬೀಸಿದರು.
ಇನ್ನು ಬಾಬಾ ಸಾಹೇಬರ ಹೆಸರಿನಲ್ಲಿ ಅಪಪ್ರಚಾರ ಮಾಡುವುದು ಸುಲಭ ಆದರೆ ಅವರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಇವರ ಕೈಯಲ್ಲಿ ಆಗದ ಕೆಲಸ ಎಂದು ಆಕ್ರೋಶ ಹೊರಹಾಕಿದರು.