ಬೆಂಗಳೂರು: ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಸಂಬಂಧ ನಡೆಸಿರುವ ಬುಡಕಟ್ಟು ಅಧ್ಯಯನ ವರದಿಯನ್ನು ತಿರಸ್ಕರಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿತು.
ಈ ಅಧ್ಯಯನ ರಾಜ್ಯ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ, ಅದನ್ನು ತಿರಸ್ಕರಿಸಬೇಕು ಎಂದು ಕೊಡವ ರಾಷ್ಟ್ರೀಯ ಒಕ್ಕೂಟ ಮತ್ತು ಎನ್‌ಯು ನಾಚಪ್ಪ ಕೊಡವ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ವಿಲೇವಾರಿ ಮಾಡಿದೆ.
ʻಕೊಡವರಿಗೆ ಎಸ್.ಟಿ ಮೀಸಲಾತಿ ಕಲ್ಪಿಸುವ ಸಂಬಂಧ ಬುಡಕಟ್ಟು ಅಧ್ಯಯನ ವರದಿಯನ್ನು ಸಲ್ಲಿಸುವಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇದು ಶಿಫಾರಸು ವರದಿಯಾಗಿದೆ.
ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧದ ಕೋರಿಕೆ ಆಧರಿಸಿ ರಾಜ್ಯ ಸರ್ಕಾರವು ಬುಡಕಟ್ಟು ಅಧ್ಯಯನ ನಡೆಸುವಂತೆ ಮೈಸೂರಿನಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಅದರ ನಿರ್ದೇಶಕ ಟಿ.ಟಿ.ಬಸವನಗೌಡ ಅವರಿಗೆ 2016ರಲ್ಲಿ ಸೂಚಿಸಿತ್ತು.
ಬುಡಕಟ್ಟು ಅಧ್ಯಯನಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆಯನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಐದು ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಬುಡಕಟ್ಟು ಅಧ್ಯಯನ ನಡೆಸಿಲ್ಲ ಎಂದಾದರೆ ಮರು ಸಮೀಕ್ಷೆ ನಡೆಸಲು ಸರ್ಕಾರ ಆದೇಶ ಮಾಡಬೇಕುʼ ಎಂದು ಪೀಠವು ಆದೇಶದಲ್ಲಿ ಹೇಳಿದೆ.