ನಂಜನಗೂಡು: ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದಲ್ಲಿ ಬಲಿಪಾಡ್ಯಮಿ ದಿನವಾದ ಶುಕ್ರವಾರ ಸಚಿವ ಎಸ್.ಟಿ.ಸೋಮಶೇಖರ್ ಗೋ ಪೂಜೆ ನೆರವೇರಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ನಂಜನಗೂಡಿಗೆ ಆಗಮಿಸಿದ ಸಚಿವರು ಶ್ರೀ ನಂಜುಂಡೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಗೋವುಗಳಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ನಂತರ ಶ್ರೀಸ್ವಾಮಿಗೆ ಪೂಜೆ ಸಲ್ಲಿಸಿದರು.
ಬಳಿಕ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಸ್ವಾಮಿ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ನವೀಕೃತ ಪ್ರತಿಮೆ ಉದ್ಘಾಟನೆ ಮಾಡಿದ ನೇರ ಪ್ರಸಾರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದನ್ನು ತಿಳಿದು ಸಚಿವರು ಸಂತಸ ವ್ಯಕ್ತಪಡಿಸಿದರು. 12 ಅಡಿ ಎತ್ತರ, 35 ಟನದದನ ಕುಳಿತ ಭಂಗಿಯಲ್ಲಿರುವ ಶಂಕರಾಚಾರ್ಯರ ಪ್ರತಿಮೆಗೆ ಹೆಗ್ಗಡದೇವನಕೋಟೆಯಿಂದ 120 ಟನ್ ಕೃಷ್ಣ ಶಿಲೆ ಬಳಸಿದ ವಿಚಾರ ತಿಳಿದು ಖುಷಿಪಟ್ಟರು.
14 ಲಕ್ಷ ರೈತರಿಗೆ 10203.52 ಕೋಟಿ ರೂ. ಸಾಲ: ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಲಾಗುತ್ತಿದೆ. 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ ನೀಡಲಾಗಿದ್ದು, ಇದರಲ್ಲಿ 14 ಲಕ್ಷ ರೈತರಿಗೆ 10,203.52 ಕೋಟಿ ರೂ. ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ನಷ್ಟ ಹಾಗೂ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತವಾಗಿರುವ ಬಗ್ಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಶಾಸಕ ಹರ್ಷವರ್ಧನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕಾಫಿ ಬೋರ್ಡ್ ಅಧ್ಯಕ್ಷ ಕೃಷ್ಣಪ್ಪಗೌಡ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮತ್ತಿತರರು ಇದ್ದರು.