ಎಚ್‌ಡಿಕೆ ತೋಟದ ಮನೆಗೆ ಸಚಿವ ಆರ್.ಅಶೋಕ್ ಭೇಟಿ: ಕುತೂಹಲ ಕೆರಳಿಸಿದ ಮಾಜಿ ಸಿಎಂ ಜತೆಗಿನ ಚರ್ಚೆ
ರಾಮನಗರ: ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಕೋರಿ ಕಂದಾಯ ಸಚಿವ ಆರ್. ಅಶೋಕ್ ಕಿಂಗ್ ಮೇಕರ್ ಜೆಡಿಎಸ್ ರಾಜ್ಯ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ನಿನ್ನೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕಲಬುರಗಿ ಪಾಲಿಕೆ ಚುನಾವಣೆಗೆ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವಂತೆ ಕೋರಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕಲಬುರಗಿ ಪಾಲಿಕೆ ಬೆಂಬಲದ ಬಗ್ಗೆ ಕುಮಾರಸ್ವಾಮಿ ಸೋಮವಾರ ಸದನದಲ್ಲಿ ಚರ್ಚಿಸೊಣ ಎಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜತೆಗೆ ಚರ್ಚಿಸಿ ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರದ ಚುನಾವಣೆ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್- ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಅಶೋಕ್, ಹಾಗೇನು ಇಲ್ಲ, ಕಾಂಗ್ರೆಸ್‌ನಲ್ಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್ ಕೂಡ ಚರ್ಚೆಯಾಗಿಲ್ಲ ಎಂದರು.
ಇನ್ನು ಸಚಿವ ಅಶೋಕ್ ಭೇಟಿಯ ಬಗ್ಗೆ ಟ್ವಿಟ್ ಮಾಡಿದ ಮಾಜಿ ಸಿಎಂ ಎಚ್‌ಡಿಕೆ, ಹಿರಿಯ ಸಚಿವ ಆರ್.ಅಶೋಕ್ ಅವರು ಶನಿವಾರ ನನ್ನ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ಸಮಾಲೋಚಿಸಿದರು.
ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ, ನಮ್ಮ ಶಾಸಕರ ಜತೆ ಎಲ್ಲ ಬೆಳವಣೆಗಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಹೇಳಿದ್ದೇನೆ.
ಪ್ರಸ್ತುತ, ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕ ಸಾ.ರಾ.ಮಹೇಶ್ ಇದ್ದರು ಎಂದು ಟ್ವೀಟ್ ಮಾಡಿದ್ದಾರೆ.