ಬಾಗಲಕೋಟೆ : ಎಲ್ಲ ವರ್ಗದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ಅವರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಸಾಲ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ನವನಗರದ ಕೆನರಾ ಬ್ಯಾಂಕ್ ಶಾಖೆ ಆವರಣದಲ್ಲಿಂದು ಜಿಲ್ಲಾ ಮಟ್ಟದ ಬ್ಯಾಂಕ್‍ಗಳ ಸಮಿತಿ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರಥಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಯಾವುದೇ ಭದ್ರತೆ ಇಲ್ಲದೇ ಸಾಲ ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಕೇಂದ್ರ ಸರಕಾರದ ವಿವಿಧ ಸಾಲ ಸೌಲಭ್ಯಗಳ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಲೀಡ್ ಬ್ಯಾಂಕ್ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಬ್ಯಾಂಕ್‍ಗಳಿಂದ ಸಾಲ ಪಡೆದು ಸ್ವಂತ ಉದ್ಯೋಗ ಕೈಗೊಳ್ಳುವದರಿಂದ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಾಗುತ್ತದೆ. ಅಲ್ಲದೇ ಸಾಲ ಸೌಲಭ್ಯದ ಮೊತ್ತ ಹೆಚ್ಚವಾದಲ್ಲಿ ಉದ್ಯೋಗದಲ್ಲಿ ಹೆಚ್ಚಿನ ಹಣ ತೊಡಗಿಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ಕೇಂದ್ರದಿಂದ ಹೆಚ್ಚಿನ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಕೋರೊನಾ ಹಿನ್ನಲೆಯಲ್ಲಿ ಜನರ ಸಂಕಷ್ಟಕ್ಕೆ ಈಡಾಗಿದ್ದು, ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮುದ್ರಾ ಯೋಜನೆಯ ಮೂಲಕ 10 ಲಕ್ಷದವರೆಗೆ ಭದ್ರತೆ ಇಲ್ಲದೇ ಬ್ಯಾಂಕ್‌ಗಳ ಮೂಲಕ ಸಾಲ ನೀಡಲಾಗುತ್ತಿದೆ.
ಇದರಿಂದ ಆರ್ಥಿಕ ಪರಿಸ್ಥಿತಿ ಪುನರಾವೃತ್ತಿಗೊಳ್ಳುವದರ ಜೊತೆಗೆ ದೇಶದ ಆರ್ಥಿಕತೆ ಹೆಚ್ಚಾಗುತ್ತದೆ. ಸಾಲ ಪಡೆದು ಆರ್ಥಿಕವಾಗಿ ಬೆಳೆದು ಮರಳಿ ಸಾಲ ಮರುಪಾವತಿ ಕೂಡಾ ಮುಖ್ಯವಾಗಿದೆ ಎಂದು ಗದ್ದಿಗೌಡರ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆನರಾ ಬ್ಯಾಂಕಿನ ಕ್ಷೇತ್ರೀಯ ವ್ಯವಸ್ಥಾಪಕ ವೈ.ಸತೀಶ ಬಾಬು ಜನರಿಗೆ ಸಾಲ ತಲುಪಿಸುವ ಉದ್ದೇಶದಿಂದ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ಬ್ಯಾಂಕುಗಳಲ್ಲಿ ಆಯೋಜಿಸಲಾಗುತ್ತಿದೆ.
ಕೇಂದ್ರ ಸರಕಾರ ಜನರ ಆರ್ಥಿಕ ಮಟ್ಟ ಮತ್ತು ಉದ್ಯೋಗ ಸೃಷ್ಟಿಸಲು ಬ್ಯಾಂಕ್‍ಗಳ ಮೂಲಕ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ ಇದರ ಪ್ರಯೋಜನೆ ಸಾರ್ವಜನಿಕರು ಪಡೆದುಕೊಳ್ಳಲು ತಿಳಿಸಿದರು. ಎಸ್.ಬಿ.ಐ ಬ್ಯಾಂಕ್‍ನ ಕ್ಷೇತ್ರೀಯ ವ್ಯವಸ್ಥಾಪಕ ನರಸಿಂಹ ಮೂರ್ತಿ, ಬಾರ್ಡನ ಯಮುನಾ ಪೈ ವಿವಿಧ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ, ಮುದ್ರಾ ಯೋಜನೆಯಡಿ, ಮನೆ ಕಟ್ಟಲು ಹಾಗೂ ವಾಹನ ಖರೀದಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಅಗ್ರಣಿ ಬ್ಯಾಂಕನ್ ವ್ಯವಸ್ಥಾಪಕ ಗೋಪಾಲರೆಡ್ಡಿ ಸೇರಿದಂತೆ ವಿವಿಧ ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.