ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸೋಮವಾರ ತಡರಾತ್ರಿ ಬೆಂಗಳೂರು ತಲುಪಿದ್ದಾರೆ. ಇಂದು ಮತ್ತು ನಾಳೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ಆ ವೇಳೆ ಬದಲಾದ ರಾಜಕೀಯ ಬಾಣ ಹೂಡಲಿದ್ದಾರೆ ಎಂದು ಊಹಿಸಿಲಾಗುತ್ತಿದೆ. ಕಾರಣ ನಿನ್ನೆ ಸಂಜೆ ಅವರು ಮುಂಬೈಗೆ ಹೋಗಬೇಕಿತ್ತು,. ಆದರೆ ಅದನ್ನು ದಿಢೀರನೆ ರದ್ದು ಮಾಡಿ ಬೆಂಗಳೂರಿಗೆ ಬಂದಿರುವುದು.
ಈಗ ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದು, ಒಂದು ಗಂಟೆಯಿಂದ ಆ ಗೌಪ್ಯ ಸ್ಥಳದಲ್ಲಿ ಆಪ್ತರ ಜೊತೆ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಅವರ ನಡೆ ಇನ್ನೂ ನಿಗೂಢವಾಗಿ ಸಾಗಿದೆ. ಸದಾಶಿವನಗರದಲ್ಲಿರುವ ಮನೆಯಿಂದ ಒಂದು ಗಂಟೆ ಹಿಂದೆ ತೆರಳಿರುವ ರಮೇಶ್ ಜಾರಕಿಹೊಳಿ, ಮಂತ್ರಿ ಸ್ಥಾನಕ್ಕಾಗಿ ತೆರೆಮರೆಯ ಕಸರತ್ತು ಜಾರಿಯಲ್ಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ರಮೇಶ್ ಜಾರಕಿಹೊಳಿ ಅವರನ್ನು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಅವರು ಮಂಗಳವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭೇಟಿಗೂ ರಮೇಶ್ ನಿರ್ಧರಿಸಿದ್ದರಾದರೂ ನಳಿನ್‌ಕುಮಾರ್ ಕಟೀಲ್ ಅವರ ಸಹೋದರ ನಿನ್ನೆ ಮೃತಪಟ್ಟ ಹಿನ್ನೆಲೆ ಕೊನೆ ಕ್ಷಣದಲ್ಲಿ ನಳಿನ್‌ಕುಮಾರ್ ಭೇಟಿ ರದ್ದು ಮಾಡಲಾಗಿದೆ.
ಈ ಮಧ್ಯೆ, ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ಜೊತೆಯೇ ಇದ್ದು, ಅವರ ಮನವೊಲಿಕೆ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಸಿಎಂ ಭೇಟಿ ಬಳಿಕ ಇಂದು ಕೆಲ ಆಪ್ತರು, ಸ್ನೇಹಿತರ ಜೊತೆ ರಮೇಶ್ ಜಾರಕಿಹೊಳಿ ಸಮಾಲೋಚನೆ ನಡೆಸಲಿದ್ದಾರೆ. ಅದಾದ ಮೇಲೆ ನಾಳೆ ರಾತ್ರಿ ಗೋಕಾಕ್‌ಗೆ ವಾಪಸ್ ಆಗಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಜುಲೈ 1ರ ಬಳಿಕ ಜಾರಕಿಹೊಳಿ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ?
ಜುಲೈ 1ರಂದು ಗೋಕಾಕ್‌ನಲ್ಲಿ ಕೋವಿಡ್ ವಿರುದ್ಧ ಹೋರಾಡಿದ ಗೋಕಾಕ್ ಮತ್ತು ಮೂಡಲಗಿ ಕ್ಷೇತ್ರದ ವೈದ್ಯರಿಗೆ ಸನ್ಮಾನ ನಡೆಯಲಿದೆ. ಆ ಸಮಾರಂಭದಲ್ಲಿ ಭಾಗಿಯಾಗಲಿರುವ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಜುಲೈ ಒಂದರ ಬಳಿಕ ಈ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.