ಹುಬ್ಬಳ್ಳಿ: ಸ್ವತಃ ರಾಜ್ಯ ಸರ್ಕಾರವೇ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾದ ಪರಿಣಾಮ ಮಂಡ್ಯ ಸಂಸದೆ ಸುಮಲತಾ ಅವರ ಆರೋಪಕ್ಕೆ ಸರ್ಕಾರದಿಂದ ಉತ್ತರವಿಲ್ಲ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಧ್ವನಿ ಎತ್ತಿದ್ದಾರೆ. ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡಿದ ನಂತರ ಸರ್ಕಾರವಾಗಲಿ, ಗಣಿ ಇಲಾಖೆ ಆದರೂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕಾಗಿತ್ತು ಎಂದು ಆದರೆ ಅದನ್ನು ಮಾಡದೆ ಕಣ್ಣುಮುಚ್ಚಿಕುಳಿತಿದೆ ಎಂದು ಕಿಡಿಕಾರಿದರು.
ಇನ್ನು ಕೆಆರ್‌ಎಸ್ ಸುತ್ತಮುತ್ತಲಿನ 20 ಕೀಲೋ ಮೀಟರ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಜೆಡಿಎಸ್ ನಾಯಕರ ಗಣಿ ಕಂಪನಿಗಳು ಇವೆ ಅಂತಾ ಆರೋಪ ಮಾಡಿದ್ದಾರೆ. ಆದರೆ, ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಕುಮಾರಸ್ವಾಮಿ ಅವರ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್‌ಡಿಕೆ ವಿರುದ್ಧವೂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ, ನಾಚೀಕೆ ಏನೂ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯನ್ನು ವರ್ಗಾವಣೆ ಮಾಡೋಕೆ 16 ಕೋಟಿ ರೂ. ಡೀಲಿಂಗ್ ಮಾಡಿದ್ದು ಸುಳ್ಳಾ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಭ್ರಷ್ಟಾಚಾರ ಮಾಡೋಕೆ ಸರ್ಕಾರಕ್ಕೆ ಕೋವಿಡ್ ಹೆಸರಿನಲ್ಲಿಅನೂಕೂಲವಾಗಿದೆ. ಕೋವಿಡ್ ಸಂದರ್ಭದಲ್ಲಿ ವಿಪಕ್ಷಗಳು ಸಹ ಪ್ರತಿಭಟನೆ ಮಾಡೋಕೆ ಬರಲ್ಲ ಅನ್ನೋದು ಗೊತ್ತಿದೆ. ಹೀಗಾಗಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆದು ಎರಡೂವರೆ ವರ್ಷ ಆಯ್ತು. ಅದರ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದರೂ ಆ ಕುರಿತು ಸದನದಲ್ಲಿ ಚರ್ಚೆ ಆಗುತ್ತಿಲ್ಲ. ಚರ್ಚೆ ಮಾಡಿದರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ. ಹೀಗಾಗಿ ಆ ಬಗ್ಗೆ ಚರ್ಚೆ ಮಾಡುತ್ತಿಲ್ಲವೆಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಮಧ್ಯದಲ್ಲಿ ಯಾವುದೇ ಬಣಗಳಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಸಹ ಇಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.