ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಬುಧವಾರ ಟಾಲಿವುಡ್ ನಟ ರಾಮ್ ಚರಣ್ ತೇಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸರಳತೆಯ ಪ್ರತೀಕವಾದ ಪುನೀತ್ ರಾಜ್ ಕುಮಾರ್ ಅವರು ಜನ ಸಾಮಾನ್ಯರೊಡನೆ ಬೆರೆಯುತ್ತಿದ್ದರು. ನಮ್ಮ ಮನೆಗೆ ಅವರು ಬಂದಾಗ ನಮ್ಮನ್ನೆ ಅತಿಥಿಯಂತೆ ಸತ್ಕರಿಸಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು ರಾಮ್ ಚರಣ್ ತೇಜ್.
ಪುನೀತ್ ನಿಧನದಿಂದ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಮಾನವೀಯತೆಗೆ ಮತ್ತೊಂದು ಹೆಸರಾದ ಅಪ್ಪುವನ್ನು ಕಳೆದೆಕೂಂಡಿದ್ದೇವೆ ಎಂದು ನೋವಿನಿಂದ ನುಡಿದರು.
ಇನ್ನು ಬೆಂಗಳೂರಿನ ಲಗ್ಗೆರೆಯ ರಿಂಗ್ ರಸ್ತೆಯ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ದೊಡ್ಡ ದಂಡೆ ಆಗಮಿಸುತ್ತಿದೆ. ಸಮಾಧಿ ಸ್ಥಳದಲ್ಲಿ ದೀಪ ಬೆಳಗಿಸಿ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಿದ್ದಾರೆ. ಜನರ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾಗುವರ ಸಂಖ್ಯೆ ಹೆಚ್ಚಾಗುತ್ತಿದೆ. ತುಮಕೂರು ತಾಲೂಕು ಹೆಬ್ಬೂರಿನ ಕೋಡಿಪಾಳ್ಯದಲ್ಲಿ ಭರತ್ (30) ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ.
ಪುನೀತ್ ಅವರಂತೆ ನನ್ನ ಕಣ್ಣುಗಳನ್ನು ಕೂಡ ದಾನ ಮಾಡುವಂತೆ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಇದೇ ತುಮಕೂರಿನ ಮತ್ತೊಬ್ಬ ಪುನೀತ್ ಅಭಿಮಾನಿ ಶ್ರೀನಿವಾಸ್ (32) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಪುನೀತ್ ಅಂತಿಮ ಯಾತ್ರೆ ಮುಗಿಸಿಕೊಂಡು ಬಂದ ನಂತರ ಈತ ಖಿನ್ನತೆಗೆ ಒಳಗಾಗಿದ್ದನು. ಎದೆ ನೋವು ಕಾಣಿಸಿಕೊಂಡ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾನೆ.
ದಾವಣಗೆರೆಯ ವಿಜಯನಗರ ಬಡಾವಣೆಯ ಸಿ.ಕುಮಾರ್ (25) ಎಂಬಾತ ಕೂಡ ಪುನೀತ್ ಸಾವಿಗೆ ಕೊರಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕೂಡ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಡೆತ್ ನೋಟ್ ನಲ್ಲಿ ತಿಳಿಸಿದ್ದಾನೆ.
ಈ ರೀತಿ ಯಾರು ತಮ್ಮ ಜೀವವನ್ನು ಕಳೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದಾರೆ.