ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸದಂತೆ ಪಿಡಿಎ ಮಷಿನ್‌ಗಳನ್ನು ಹಿರಿಯ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ ಎಂಬುದು ಸುಳ್ಳು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ.
ನೂತನ ಗೃಹ ಮಂತ್ರಿ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಂಚಾರ ಪೊಲೀಸರು ಮಾಡುತ್ತಿದ್ದ ಸುಲಿಗೆ ನಿಲ್ಲಿಸಿದ್ದಾರೆ. ಗೃಹ ಸಚಿವರ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿಲ್ಲ. ದಂಡ ವಿಧಿಸುವ ಪಿಡಿಎ ಯಂತ್ರಗಳನ್ನು ಹಿರಿಯ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬ ಸಂಗತಿ ದೊಡ್ಡ ಸುದ್ದಿಯಾಗಿತ್ತು.
ಕೆಲವು ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಬಿತ್ತರಿಸಿದ್ದವು. ನೂತನ ಗೃಹ ಸಚಿವರ ಹೆಸರಿನಲ್ಲಿಹರಿಬಿಟ್ಟ ಈ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತ್ತು. ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿರುವ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸದಂತೆ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ ಎಂಬುದರ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಸಂಚಾರ ಪೊಲೀಸರಿಂದಈ ಯಂತ್ರಗಳನ್ನು ವಾಪಸು ಪಡೆದಿಲ್ಲ. ಪಿಡಿಎ ವಾಪಸ್ ಪಡೆಯುವ ಬಗ್ಗೆ ಹೇಳಿಕೆ ನೀಡಿರುತ್ತಾರೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ಯಾವುದೇ ಪ್ರತಿನಿಧಿಯೂ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿಲ್ಲ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಬಾರದು ಎಂಬ ಆದೇಶ ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು” ಎಂದು ಸ್ಪಷ್ಟ ಪಡಿಸಿದ್ದಾರೆ.
ನೂತನ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಕೆಲವು ಜನಪರ ಹಾಗೂ ಪೊಲೀಸ್ ಕಲ್ಯಾಣ ಕುರಿತ ವಿಚಾರಗಳನ್ನು ಪ್ರಸ್ತಾಪಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ತುಮಕೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ಪೊಲೀಸರ ಕಲ್ಯಾಣಕ್ಕಾಗಿ ಔರಾದ್ಕರ್ ವರದಿಯನ್ನು ಜಾರಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಾಗಿ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದರು.
ಸಂಚಾರದ ಹೆಸರಿನಲ್ಲಿ ವಸೂಲಿ ಮಾಡುವ ಸಂಚಾರ ಪೊಲೀಸರಿಗೆ ಆರಂಭದಲ್ಲಿಯೇ ಬಿಸಿ ಮುಟ್ಟಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿವರನ್ನು ರಸ್ತೆ ಬದಿ ನಿಲ್ಲಿಸಿ ದಂಡ ಹಾಕಬಾರದು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಗೃಹ ಸಚಿವರ ಆದೇಶದ ಹಿನ್ನೆಲೆಯಲ್ಲಿ ಸಂಚಾರ ನಿಯಮ ಜಾರಿಗಾಗಿ ಪೊಲೀಸರಿಗೆ ನೀಡಿರುವ ಪಿಡಿಎ ಯಂತ್ರಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬ ಸುದ್ದಿ ಕೆಲವು ಸಂಸ್ಥೆಗಳಲ್ಲಿ ಪ್ರಕಟವಾಗಿದ್ದೇ ಇದೀಗ ಸಂಚಾರ ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನು ನಿಲ್ಲಿಸಬೇಡಿ ಎಂದು ಗೃಹ ಸಚಿವರೇ ಹೇಳಿದ ಮೇಲೆ ದಂಡ ಯಾಕೆ ಎಂದು ಪ್ರಶ್ನೆ ಮಾಡುವಂತಾಗಿದೆ. ಅದರಲ್ಲೂ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ವಾಸ್ತವದಲ್ಲಿ ಅರಗ ಜ್ಞಾನೇಂದ್ರ ಹೆಸರಿನಲ್ಲಿ ಈ ಸುದ್ದಿಯನ್ನು ಹುಟ್ಟು ಹಾಕಿದ್ದು ಯಾರು? ಇದರ ಹಿಂದಿರುವ ಉದ್ದೇಶ ಏನು? ಎಂಬುದು ಮಾತ್ರ ನಿಗೂಢ.