ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮೌರ್ಯ ಸರ್ಕಲ್ನಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ಈ ಹಿಂದೆ ನಡೆದ ಮುಷ್ಕರದ ವೇಳೆ ಸಿಬ್ಬಂದಿಗಳ ವಜಾ, ವರ್ಗಾವಣೆ ಮತ್ತು ಅಮಾನತು ಆದವರ ಮರು ನೇಮಕಕ್ಕೆ ಆಗ್ರಹಿಸಿ, ಸಾರಿಗೆ ನೌಕರರು ಸಿಐಟಿಯು ನೇತೃತ್ವದಲ್ಲಿ ಈ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾರಿಗೆ ಎಲ್ಲ ಸಂಘಟನೆಗಳು ಒಟ್ಟಾಗಿ ಈ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಬೆಂಬಲಿಸಬೇಕು ಎಂದು ನೌಕರರ ಮುಖಂಡ ಆನಂದ್ ಮನವಿ ಮಾಡಿದ್ದಾರೆ.
ಇನ್ನು ಏಪ್ರಿಲ್ನಲ್ಲಿ ನಡೆದ ಮುಷ್ಕರ ಮುಗಿದು 7 ತಿಂಗಳುಗಳಾದರೂ ಇನ್ನೂ ವಾಪಸ್ ತೆಗೆದುಕೊಂಡಿಲ್ಲ. ಈ ಬಗ್ಗೆ ಎಲ್ಲ ನೌಕರರು ಮತ್ತು ನೌಕರರ ಸಂಘಟನೆಗಳ ಮುಖಂಡರು ಒಗ್ಗಟಾಗಿ ನೌಕರರ ಪರವಾದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ಆಡಳಿತ ವರ್ಗವನ್ನು ಆಗ್ರಹಿಸಬೇಕಾದ ಅನಿವಾರ್ಯತೆ ಇದ್ದು, ಇದಕ್ಕೆ ಬೇಧಭಾವ ಮರೆತು ಎಲ್ಲರೂ ಒಂದಾಗಬೇಕು ಎಂದರು.
ಇನ್ನು ನಾವು ನೌಕರರ ಪರವಾಗಿ ಇದ್ದೇವೆ ಎಂದು ಹೇಳಿಕೊಳ್ಳುವ ಸಂಘಟನೆಗಳ ಮುಖಂಡರು ಈ ನೌಕರರ ಪರವಾದ ಹೋರಾಟದಲ್ಲಿ ಭಾಗವಹಿಸುವ ಮೂಲಕ ನೌಕರರಿಗೆ ಒಳ್ಳೆದಾಗುವುದಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಬೆಳಗ್ಗೆ ಅನಿರ್ದಿಷ್ಟಾವಧಿ ಪ್ರಾರಂಭವಾದಾಗ ಸಾವಿರಾರು ನೌಕರರು ಭಾಗವಹಿಸಿದ್ದರೂ ಈಗ ಸ್ವಲ್ಪಮಂದಿಯಷ್ಟೇ ಇದ್ದಾರೆ ಎಂದು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ವಾಸ್ತವವಾಗಿ ನಮಗೆ ಎಲ್ಲರೂ ಇರುವುದು ಬೇಡ, ರಕ್ಷಣೆಗೆ ತೊಡಕಾಗುತ್ತದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸದ್ಯ ಈ ಅಹೋರಾತ್ರಿ ಹೋರಾಟದಲ್ಲಿ ಈಗ ನೂರಾರು ಮಂದಿ ಮಾತ್ರ ಇದ್ದೇವೆ. ರಾತ್ರಿ ಮನೆಗೆ ಹೋಗಿರುವ ನೌಕರರು ಮತ್ತೆ ಬೆಳಗ್ಗೆ ಬರಲಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಕಾರ್ಮಿಕರ ಸಮಸ್ಯೆ ನೀಗಿಸುವ ನಿಮ್ಮ ಹೋರಾಟಕ್ಕೆ ವಾರದ ರಜೆ ಇರುವವರು, ಅಮಾನತು, ವಜಾಗೊಂಡಿರುವ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಮೂಲಭೂತ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಎಲ್ಲ ನೌಕರರಿಗೂ ಮನವಿ ಮಾಡಿದರು.
ಇನ್ನು ನಮ್ಮ ಈ ಅಹೋರಾತ್ರಿ ಧರಣಿಗೆ ಹಲವು ಕನ್ನಡಪರ, ದಲಿತಪರ ಸೇರಿದಂತೆ ಎಲ್ಲ ವಿಧದ ಸಂಘಟನೆಗಳ ಮುಖಂಡರು ಬೆಂಬಲು ಸೂಚಿಸುತ್ತಿದ್ದಾರೆ. ಆದ್ದರಿಂದ ನಮ್ಮ ಎಲ್ಲ ಸಂಘಟನೆಗಳು ಈ ವೇಳೆ ದೂರ ಉಳಿಯದೆ ನೊಂದ ನೌಕರರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಹೇಳಿದರು.
ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಧರಣಿ: ನಮ್ಮ ವಜಾಗೊಂಡ ಕಾರ್ಮಿಕರನ್ನು ಮೊದಲು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು. ಜತೆಗೆ ಏಪ್ರಿಲ್ 6ರ ಹಿಂದೆ ಇದ್ದ ಸ್ಥತಿಯಲ್ಲಿ ನೌಕರರನ್ನು ನಡೆಸಿಕೊಳ್ಳಬೇಕು. ನಂತರ ನಮ್ಮ ಪ್ರಮುಖವಾದ ಬೇಡಿಕೆಗಳು ಈಡೇರುವವರೆಗೂ ನಾವು ಧರಣಿ ಸ್ಥಳದಿಂದ ಹೊರಹೋಗುವುದಿಲ್ಲ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದ್ದಾರೆ.
ಕಳೆದ ತಿಂಗಳು ಮರು ನೇಮಕ ಮಾಡೋದಾಗಿ ಸಚಿವರು ಹೇಳಿದ ಬಳಿಕವೂ ಬಿಎಂಟಿಸಿ 57 ನೌಕರರನ್ನು ವಜಾ ಮಾಡಿದೆ. ಮುಷ್ಕರದ ವೇಳೆ ಕೆಲಸ ಕಳೆದುಕೊಂಡಿರುವ 2200 ನೌಕರರ ಮರು ನೇಮಕ ಕೂಡಲೇ ಆಗಬೇಕು. ಆರ್ಥಿಕ ಸಮಸ್ಯೆಯಿಂದ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾರಿಗೆ ನೌಕರರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು.
ಇನ್ನು ಇಂದು (ಅ.27) ಬೆಳಗ್ಗೆ 11 ಗಂಟೆಗೆ ಆರಂಭವಾದ ಧರಣಿ ನಿರಂತರವಾಗಿ ಮುಂದುವರಿದಿದ್ದು, ಅಹೋರಾತ್ರಿ ನಡೆಯುತ್ತಿದೆ. ಇದಕ್ಕೂ ಮುನ್ನ ಮಧ್ಯಾಹ್ನದ ಊಟವನ್ನು ಧರಣಿ ಸ್ಥಳದಲ್ಲೇ ಎಲ್ಲ ಪ್ರತಿಭಟನಾ ನಿರತರು ಮಾಡಿದರು.
ಕೆಎಸ್ಆರ್ಟಿಸಿ ನಿಗಮಗಳ ನೌಕರರ ಫೆಡರೇಷನ್, ಸಿಐಟಿಯು, ನಾಲ್ಕೂ ನಿಗಮಗಳ ಒಕ್ಕಲಿಗರ ಸಂಘಟನೆ ಸೇರಿದಂತೆ ನಾಲ್ಕು ನಿಗಮದ ಸಾರಿಗೆ ಮುಖಂಡರು ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಸೌಜನ್ಯಕ್ಕೂ ಧರಣಿ ಸ್ಥಳಕ್ಕೆ ಅಧಿಕಾರಿಗಳಾಗಲೀ ಅಥವಾ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರಾಗಲೀ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಲಿಲ್ಲ. ಇವರೆಲ್ಲ ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದರಾ? ಆದರೂ ನಮ್ಮ ಸಮಸ್ಯೆ ಕೇಳಲು ಏಕೆ ಬರಲಿಲ್ಲ. ನಾವು ಸಂಸ್ಥೆಯ ನೌಕರರಲ್ಲವೇ. ನಮ್ಮನ್ನು ಭೇಟಿ ಮಾಡಿ ಮಾತನಾಡಿದರೆ ಏನು ಕಳೆದುಕೊಳ್ಳುತ್ತಿದ್ದರು. ಅಧಿಕಾರಿಗಳು ಈ ರೀತಿ ತಾರತಮ್ಯತೆ ಮಾಡುತ್ತಿರುವುದರಿಂದ ಬೇಸತ್ತು ಮತ್ತೆ ನಾವು ಧರಣಿ ಕೂರುವಂತಾಗಿದೆ.
l ಮಂಜುನಾಥ್, ಸಿಐಟಿಯು ಪ್ರಧಾನ ಕಾರ್ಯದರ್ಶಿ