ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಮಾಡಿರುವ ನೌಕರರ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ವೇತನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ವಾಯುವ್ಯ ನಿಗಮದ ಗೌರವಾಧ್ಯಕ್ಷ, ಹೈ ಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಮನವಿ ಮಾಡಿದ್ದಾರೆ.
ನಗರದ ಸಿಎಂ ಬೊಮ್ಮಾಯಿ ಅವರ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವ ಮೂಲಕ ನೌಕರರ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡರು.
ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಿಎಂ ಬೊಮ್ಮಾಯಿ ಒಂದು ವಾರದೊಳಗಾಗಿ ಸಾರಿಗೆ ನೌಕರರ ಸಮಸ್ಯೆಯನ್ನು ಬಗೆ ಹರಿಸುವ ಭರವಸೆ ನೀಡಿ, ಸಾರಿಗೆ ನೌಕರರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುವುದು ಎಂದು ನಗುಮುಖದೊಂದಿಗೆ ಆಶ್ವಾಸನೆ ನೀಡಿದರು.
ಹೀಗಾಗಿ ಒಂದು ವಾರದಲ್ಲಿ ಸಾರಿಗೆ ನೌಕರರ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ವಕೀಲ ನೀರಲಕೇರಿ ಆಶಯ ವ್ಯಕ್ತಪಡಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ?: ಸಾರಿಗೆ ಮುಷ್ಕರದ ಸಮಯದಲ್ಲಿ ನೌಕರರ ವಜಾ, ಪೊಲೀಸ್ ಪ್ರಕರಣ, ವರ್ಗಾವಣೆ ಮತ್ತು ಅಮಾನತು ಪ್ರಕರಣಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ.
ದುಡಿಮೆಯನ್ನು ನಿಷ್ಠೆಯಿಂದ ನಂಬಿ ಹೋರಾಟದ ಮಾರ್ಗದಲ್ಲಿ ಬದುಕುವವರಿಗೆ ಯಶಸ್ಸು ತಾನೇ ಒಲಿದು ಬರುತ್ತದೆ ಎಂಬುದಕ್ಕೆ ತಾವೇ ಸಾಕ್ಷಿ. ತಮ್ಮ ಪಕ್ಷ ನಿಮ್ಮ ಪಕ್ಷನಿಷ್ಠೆ, ಕರ್ತವ್ಯ ನಿಷ್ಠೆಯನ್ನು ಕಂಡು ತೀವ್ರ ಪೈಪೋಟಿಯ ಮಧ್ಯೆ ತಮ್ಮನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿಸಿರುವುದು ನಮ್ಮ ಸೌಭಾಗ್ಯವೇ ಸರಿ.
ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಸಮಸ್ತ ಸಾರಿಗೆ ನೌಕರರ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಅಧಿಕಾರವಧಿಯಲ್ಲಿ ನಮ್ಮ ರಾಜ್ಯ ರಾಮರಾಜ್ಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಮಾನ್ಯರೇ ಸಾರಿಗೆ ನೌಕರರು ಹಗಲಿರುಳು ಮಳೆ, ಬಿಸಿಲು, ಹಬ್ಬ-ಹರಿದಿನ ಎನ್ನದೆ ಅತಿ ಹೆಚ್ಚು ಸಮಯ ಒತ್ತಡದಲ್ಲಿ ಕುಟುಂಬವನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರದ ಒಂದು ಅಂಗವಾಗಿದ್ದಾರೆ. ಇತರ ಇಲಾಖೆಯ ನಿಗಮಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದು ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ಎಲ್ಲಾ ಕಷ್ಟ-ನಷ್ಟ ಅನುಭವಿಸಿಕೊಂಡು ಶಾಂತಿಯುತವಾಗಿ ಹೋರಾಟ ಮಾಡುತ್ತಾ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೆವು. ಎಲ್ಲಾ ಸವಲತ್ತುಗಳನ್ನು ನಮ್ಮ ಜನಪರವಾದ ಸರ್ಕಾರ ಇರುವಾಗ ಮಾತ್ರ ಪಡೆಯಬಹುದೆಂದು ಗಮನಸೆಳೆಯಲು ಹೋರಾಟ ಮಾಡಿದ್ದೇವೆ ಹೊರತು ನಮಗೆ ಅನ್ಯ ಉದ್ದೇಶ ಇರಲಿಲ್ಲ.
ತಮಗೆ ತಿಳಿದಿರುವಂತೆ ಈ ಹೋರಾಟದ ಹಾದಿಯಲ್ಲಿ ಆಡಳಿತವರ್ಗ ಮುಷ್ಕರ ಸಮಯದಲ್ಲಿ ನೌಕರರ ವಿರುದ್ಧ ತೆಗೆದುಕೊಂಡ ಕ್ರಮಗಳಾದ ವರ್ಗಾವಣೆ, ವಜಾ ಅಮಾನತು ಮತ್ತು ಪೊಲೀಸ್ ಪ್ರಕರಣಗಳ ಕ್ರಮಗಳನ್ನು ತೆರವುಗೊಳಿಸಿ ಏಪ್ರಿಲ್ 6- 2021ರ ಸಂದರ್ಭದಲ್ಲಿ ಇದ್ದಂತಹ ಸ್ಥಿತಿಗೆ ತರಬೇಕೆಂದು ಮನವಿ ಮಾಡುತ್ತೇವೆ.
ರಾಜ್ಯದ್ಯಂತ ನೌಕರರ ಮೇಲೆ ಜರುಗಿಸಿರುವ ಪೊಲೀಸ್ ಪ್ರಕರಣಗಳ ರದ್ದತಿ ಮತ್ತು ಕಲಂ -23ರ ರದ್ಧತಿ, ಮುಷ್ಕರ ಹಾಗೂ ನಂತರದ ದಿನಗಳ ವೇತನ ಸರಿಪಡಿಸುವಿಕೆ ಯನ್ನು ದಯಾಳುಗಳಾದ ತಾವು ಮಾಡಿಕೊಡಿ.
ಇನ್ನು ಸುಮಾರು 300 ರಿಂದ 450 ಕಿಲೋಮೀಟರ್ ದೂರಕ್ಕೆ ವರ್ಗಾವಣೆ ಮಾಡಿರುವ ಮಹಿಳಾ ಹಾಗೂ ನೌಕರರ ಕುಟುಂಬಗಳ ಭವಿಷ್ಯ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯ ನಿಮ್ಮ ಕೈಯಲ್ಲಿದೆ.
ಮುಷ್ಕರದ ಸಮಯದಲ್ಲಿ ರಾಜ್ಯಾದ್ಯಂತ ನೌಕರರ ಮೇಲೆ ಆದ ಪೊಲೀಸ್ ದೂರು ಗಳಿಂದಾಗಿ ವೇತನವು ಇಲ್ಲದೆ, ಕೆಲಸವು ಇಲ್ಲದೆ ಜೈಲು ಹಾಗೂ ಕೋರ್ಟ್‌ಗಳನ್ನು ಅಲೆದಾಡುವ, ನರಕಯಾತನೆಯ ಜೀವನವನ್ನು ನೌಕರರು ಅನುಭವಿಸುವಂತಾಗಿದೆ.
ಈ ಎಲ್ಲವನ್ನು ಮನಗಂಡು ದಯಾಳುಗಳಾದ ತಾವು ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣವನ್ನು ರದ್ದುಪಡಿಸಿ, ಏಪ್ರಿಲ್ 6-2021ರ ಹಿಂದೆ ಇದ್ದ ಸ್ಥಿತಿಯನ್ನು ನೌಕರರಿಗೆ ಒದಗಿಸಿ ಹಾಗೂ ಶಾಶ್ವತ ಪರಿಹಾರ ಕಲ್ಪಿಸುತ್ತೀರೆಂದು ನಂಬಿರುವ ಸಾರಿಗೆ ನೌಕರರ ಕುಟುಂಬ ವರ್ಗ ಎಂದು ಸಿಎಂ ಅವರಿಗೆ ನೌಕರರ ಪರವಾಗಿ ಸಾರಿಗೆ ನೌಕರರ ಕೂಟ, ವಾಯುವ್ಯ ನಿಗಮದ ಗೌರವಾಧ್ಯಕ್ಷ ವಕೀಲ ಪಿ.ಎಚ್. ನೀರಲಕೇರಿ ಮನವಿ ಮಾಡಿದ್ದಾರೆ.
ಖಂಡಿತವಾಗಿಯೂ ನೀವು ಮಾಡಲೇಬೇಕು ಸರ್ ಯಾಕಂದ್ರೆ ಮುಂದಿನ ದಿನ ನೀವು ವೋಟ್ ಕೇಳೋಕಾದ್ರು ಮಾಡಲೇಬೇಕು ಇಲ್ಲಾ ಅಂದ್ರೆ ಆ ಏರಿಯಾಗೇ ಹೋಗಿ ವೋಟ್ ಕೇಳೋದಲ್ಲ ಬರಿ ಕಾಲ್ ಇಡೋಕು ಕಷ್ಟ್ ಆಗುತ್ತೆ ಯಾರೇ ಆಗಿರಲಿ ಯಾವ ನೌಕರರು ಆದ್ರೂ ತಮಗೆ ಅನ್ಯಾಯ ಆದಾಗ ಮಾತ್ರ ಹೋರಾಟ ಮಾಡ್ತಾರೆ ಇಲ್ಲಾ ಅಂದ್ರೆ ಯಾರು ಮಾಡಲ್ಲ ದಯವಿಟ್ಟು ಇದನ್ನ ಮಾಡಿ ನಾನು ಒಬ್ಬ ಪ್ರಯಾಣಕ ನಾಗಿ ಹೇಳ್ತ ಇದ್ದೀನಿ
ದಯವಿಟ್ಟು ದಯವಿಟ್ಟು ಈ ಮನವಿಯನ್ನು ಪುರಸ್ಕರಿಸಿ ನಮಗೆ ನ್ಯಾಯವನ್ನು ಕೊಡಿಸಿ ಸಮಾನ ವೇತನವನ್ನು ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ