ಬೆಂಗಳೂರು: ಕೆಎಸ್ಆರ್‌ಟಿಸಿ ಬಸ್ ಗಳಲ್ಲಿ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ನೌಕರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಬಂಧಿತ ಆರೋಪಿಗಳು. ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿರುವ ಆರೋಪಿಗಳಿಬ್ಬರೂ ಕೂಡ ಕೆಲಸ ನಿರ್ವಹಿಸುತ್ತಿದ್ದರು. ಸರ್ಕಾರಿ ಬಸ್ ಗಳಲ್ಲಿ ಮುಕ್ತ ಓಡಾಟಕ್ಕೆ ಅವಕಾಶ ಹಿನ್ನೆಲೆ ಕಲಬುರಗಿಯಿಂದ ಗಾಂಜಾ ತಂದು ಬೆಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು.
ಬಂಧಿತರಿಂದ 9.8 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೆಂಗೇರಿ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶವನ್ನು ಅಡ್ಡೆ ಮಾಡಿಕೊಂಡಿದ್ದ ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಕಳೆದ ಮೂರು ವರ್ಷಗಳಿಂದ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದರು.
ವಿಜಯಪುರ ಮತ್ತು ಕಲಬುರಗಿಯಿಂದ ಗಾಂಜಾ ತಂದು ಕೆ.ಜಿ.ಗೆ 40 ರಿಂದ 50 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿದ್ದು, ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ಕೆಲಸದಲ್ಲಿದ್ದುಕೊಂಡು ಈ ಕೃತ್ಯ ಎಸಗುತ್ತಿದ್ದರು ಎಂದರೆ ಇವರ ಇಂದೆ ಯಾರು ಯಾರು ಇದ್ದಾರೆ ಎಂಬುದನ್ನು ಪೊಲೀಸರು ಬಯಲಿಗೆಳೆಯಬೇಕಿದೆ. ಏಕೆಂದರೆ ಈ ಇಬ್ಬರಿಂದಲೇ ಈ ದಂಧೆ ನಡೆಸಲು ಸಾಧ್ಯವಿಲ್ಲ, ಕಾಣದ ಕೈಗಳು ಇದರ ಹಿಂದೆ ಇವೆ. ಅವುಗಳ ಬಗ್ಗೆ ಪೊಲೀಸರು ಸಮಗ್ರ ವಿಚಾರಣೆ ನಡೆಸಬೇಕು. ಆ ನಂತರವೇ ಸತ್ಯ ಹೊರಬೀಳಲಿದೆ.