ಬೆಂಗಳೂರು: ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ಕಾಣಿಸುತ್ತಿದ್ದಾರೆ. ಹೀಗಾಗಿ ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.
ಇಂದು ಮಗುವಿನ ತೊಟ್ಟಿಲು ಶಾಸ್ತ್ರ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಹಲವು ದಿನಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂಬುದನ್ನು ನಾನು ಚಿರುವಿನಿಂದ ಕಲಿತೆ. ಚಿರು ಅಂದ್ರೆ ನನ್ನ ಹ್ಯಾಪಿನೆಸ್. ಮಗನ ಆಗಮನದಿಂದ ಡಬಲ್ ಸಂಭ್ರಮ ಇದೆ.ಆದರೆ ಚಿರು ಕಳೆದುಕೊಂಡ ದುಃಖವು ಇದೆ ಅದನ್ನು ಮರೆಯಲು ಸಾಧ್ಯವಿಲ್ಲ. ಆದರೆ ಇಂದು ಸಂತಸ ದಿನವಾಗಿದೆ ಎಂದು ದುಃಖದ ಕಿಣ್ಣೀರಿನ ಜತೆಗೆ ಸಂತಸ ಆನಂದಭಾಷ್ಪದೊಂದಿಗೆ ಹೇಳಿದರು.
ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷ ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ. ತೊಟ್ಟಿಲು ತವರು ಮನೆಯಿಂದ ಬಂದಿದೆ. ನಾಡಿನ ಪ್ರತಿಯೊಬ್ಬರೂ ನನ್ನನ್ನು, ಚಿರು ಹಾಗೂ ನಮ್ಮ ಕುಟುಂಬವನ್ನು ಮನೆಯವರಂತೆಯೇ ನೋಡಿಕೊಂಡಿದ್ದಾರೆ. ಇದೀಗ ನಾನು ಸ್ಟ್ರಾಂಗ್ ಇದ್ದೀನೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರೂ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ. ಆದರೆ, ನನಗೆ ನನ್ನ ಮಗನೇ ಶಕ್ತಿ. ಇದೆಲ್ಲವನ್ನೂ ಚಿರು ನನ್ನ ಕೈಯಲ್ಲಿ ಮಾಡಿಸುತ್ತಿದ್ದಾರೆ. ಮಗನನ್ನು ನೋಡಿದವರೆಲ್ಲೂ ಚಿರು ಜೆರಾಕ್ಸ್ ಎಂದೇ ಹೇಳುತ್ತಿದ್ದಾರೆ ಎಂದರು.
ಶೀಘ್ರದಲ್ಲೇ ಒಳ್ಳೆಯ ಸಮಯವನ್ನು ನೋಡಿ ಮಗುವಿನ ನಾಮಕರಣವನ್ನು ನೆರವೇರಿಸಲಾಗುತ್ತದೆ. ಈ ನಡುವೆ ಹೆಸರನ್ನು ಇನ್ನೂ ನಿರ್ಧಾರ ಮಾಡಿಲ್ಲ. ಕೆಲ ಅಕ್ಷರಗಳು ಬಂದಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಚಿರು ಮಗನಾಗಿರುವ ಕಾರಣ ವಿಶೇಷವಾದ ಹೆಸರಿಗಾಗಿ ಹುಡುಕುತ್ತಿದ್ದೇವೆ ಎಂದು ಹೇಳಿದರು.
ಜೂನಿಯರ್ ಚಿರುವಿನ ತೊಟ್ಟಿಲು ಶಾಸ್ತ್ರವನ್ನು ಜೆ.ಪಿ. ನಗರದ ಮೇಘನಾ ರಾಜ್ ಮನೆಯಲ್ಲಿ ನೆರವೇರಿಸಲಾಯಿತು. ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಹಿತೈಷಿಗಳಷ್ಟೇ ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಸರಳವಾಗಿ ಕಾರ್ಯಕ್ರಮವನ್ನು ಪೂರಣಗೊಳಿಸಲಾಯಿತು. ಈ ವೇಳೆ ಚಿರಂಜೀವಿ ಸರ್ಜಾರ, ಅಜ್ಜಿ ಲಕ್ಷ್ಮೀ ದೇವಮ್ಮ ಹಾಗೂ ತಾಯಿ ಅಮ್ಮಾಜಿ ಕೂಡ ಬಂದಿದ್ದರು.