- ವಿಜಯಪಥ ಸಿನಿಸುದ್ದಿ
ಬೆಂಗಳೂರು: ಕನ್ನಡದಲ್ಲಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ (90)ವಿಧಿವಶರಾಗಿದ್ದಾರೆ. ಈ ಮೂಲಕ 2021ನೇ ವರ್ಷದ ಆರಂಭದಲ್ಲೇ ಬೇಸರ ಸುದ್ದಿಯೊಂದು ವರದಿಯಾದಂತ್ತಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ ಅವರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೊವಿಡ್ ಸೋಂಕಿಗೆ ತುತ್ತಾಗಿದ್ದ ಶನಿ ಮಹಾದೇವಪ್ಪ ಅವರು ಭಾನುವಾರ ಸಂಜೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿವಶರಾದರು.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಮೃತರು, ಕನ್ನಡ ಸಿನಿಮಾರಂಗದಲ್ಲಿ ಚಿರಪರಿಚಿತರು ಅದರಲ್ಲೂ ಶನಿಮಹಾದೇವಪ್ಪ ಎಂದರೆ ಎಲ್ಲರಿಗೂ ಸ್ವಲ್ಪ ಹೆಚ್ಚಿನ ಪ್ರೀತಿ. 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಮೂರುವರೆ ವಜ್ರಗಳು ಸೇರಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ರೀತಿ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದರು. ಅದರಲ್ಲೂ ವರನಟ ಡಾ ರಾಜ್ ಕುಮಾರ್ ಜೊತೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕಲಾವಿದ ಶನಿ ಮಹಾದೇವಪ್ಪನವರು ಡಾ.ರಾಜ್ ಕುಮಾರ್ ಜೊತೆಯಲ್ಲಿಯೇ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಶನಿ ಮಹದೇವಪ್ಪ ನಿಧನರಾದ ವಿಷಯವನ್ನು ಕಲಾವಿದ ಡಿಂಗ್ರಿ ನಾಗರಾಜ್ ಅವರು ಮಾಹಿತಿ ಹಂಚಿಕೊಂಡಿದ್ದರು. ಇಂದು ಸುಮನಹಳ್ಳಿ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ. ಶನಿ ಮಹಾದೇವಪ್ಪ ನಿಧನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದೀಪ್, ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಶ್, ಜಗ್ಗೇಶ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ, ‘1984ರಿಂದ ಬಲ್ಲೆ ಇವರನ್ನು ಮಾವ ಎಂದು ಕರೆಯುತ್ತಿದ್ದೆ. ಅಣ್ಣನ ಆತ್ಮೀಯ. ಸಕ್ಕರೆ ಖಾಯಿಲೆಯಿಂದ ಎರಡು ಕಣ್ಣು ಕಳೆದುಕೊಂಡಿದ್ದ. 10ವರ್ಷ ಹಿಂದೆ ಮೇಯರ್ ಫಂಡ್ ನಿಂದ ಈತನಿಗೆ ವಿಶೇಷ ಪ್ಯಾಕೇಜ್ 5ಲಕ್ಷ ರೂ. ಬರುವಂತೆ ಶ್ರಮಿಸಿದ್ದೆ ಹಾಗೂ ವೈಯಕ್ತಿಕವಾಗಿ ನಾನು ಬ್ಯಾಂಕ್ ಜನಾರ್ದನ ಜೂತೆಹೋಗಿ ಕೈಲಾದ ಸಹಾಯ ಮಾಡಿದ್ದೆ. ಇವರ ಆತ್ಮಕ್ಕೆ ಶಾಂತಿ’ ಎಂದು ಹೇಳಿದ್ದಾರೆ.
ಅಂಬರೀಶ್ ಜೊತೆ ಇರುವ ಪೋಟೋ ಶೇರ್ ಮಾಡಿ, ಇಂದು ನಮ್ಮನ್ನೆಲ್ಲ ಅಗಲಿದ ಹಿರಿಯ ಕಲಾವಿದರಾದ ಶನಿ ಮಹಾದೇವಪ್ಪನವರ (90 ವರ್ಷ) ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವೆ. ಸರಿ ಸುಮಾರು 550 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರ ಕಲಾಸೇವೆ ಚಿರಸ್ಥಾಯಿ. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ನಟಿ ಮತ್ತು ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.
ಅಪ್ಪಾಜಿಯವರ ಜೊತೆ ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಕವಿರತ್ನ ಕಾಳಿದಾಸ, ಮೂರೂವರೆ ವಜ್ರಗಳು ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ ಹಿರಿಯ ನಟರಾದ ಶನಿ ಮಹದೇವಪ್ಪನವರು ನಮ್ಮನ್ನು ಅಗಲಿದ್ದಾರೆ ಎಂದು ನಟ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
Om shanthi