ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಕಲಿಯುಗದ ನಡೆದಾಡುವ ದೇವರು ಎನಿಸಿಕೊಂಡಿದ್ದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಎರಡನೇ ವರ್ಷದ ಪುಣ್ಯ ಸ್ಮರಣೆ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ನಡೆಯಿತು.
ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸರಳವಾಗಿ ವಿಶಿಷ್ಟತೆಯಿಂದ ನೇರವೇರಿತು. ಅಲಂಕೃತ ಮಂಟಪದಲ್ಲಿ ಹಾಕಲಾಗಿದ್ದ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಯಿತು. ಪೂಜಾ ಕೈಂಕರ್ಯ ನೇರವೇರಿದ ಬಳಿಕ ಸಾರ್ವಜನಿಕರಿಗೆ ಉಪಾಹಾರ ವಿತರಿಸಲಾಯಿತು.
ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣ ಪರಂಪರೆಯನ್ನು ಉತ್ತುಂಗಕ್ಕೆ ಕೊಂಡೋಯ್ಯಲು ತ್ರಿವಿಧ ದಾಸೋಹಕ್ಕೆ ಶತಮಾನದ ಬದುಕನ್ನು ಸಾರ್ಥಕಪಡಿಸಿಕೊಂಡ ಶಿವಕುಮಾರ ಶ್ರೀಗಳು ಶಿವನಲ್ಲಿ ಐಕ್ಯರಾಗಿದ್ದರೂ ಕೋಟ್ಯಂತರ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ರಾಜ್ಯದೆಲ್ಲೆಡೆ ಅವರ ಸ್ಮರಣೆ ಮತ್ತು ಜನ್ಮ ದಿನದ ಕಾರ್ಯಕ್ರಮಗಳು ಭಕ್ತರ ದೊಡ್ಡ ಬಯಕೆಯಂತೆ ಅದ್ದೂರಿಯಾಗಿ ಆಚರಣೆಯಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸರಳವಾಗಿಯಾದರೂ ಅಚ್ಚುಕಟ್ಟಾಗಿ ಪರಮಪೂಜ್ಯರ ಪುಣ್ಯಸ್ಮರಣೆ ಆಯೋಜಿಸಿದ ವೀರಶೈವ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಿಗೆ ಶ್ರೀಗಳ ಆಶೀರ್ವಾದವಿರಲಿದೆ ಎಂದರು.
ಹೊಸೂರುಹುಂಡಿ ಮಠದ ರಾಜಶೇಖರ ಸ್ವಾಮೀಜಿ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಯುವ ಘಟಕದ ಅಧ್ಯಕ್ಷ ಬಿ.ಎಂ.ವಿಜಯಕುಮಾರ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಶಿವಕುಮಾರ್, ನೂತನ ಗ್ರಾಪಂ ಸದಸ್ಯರಾದ ಕಿರಗಸೂರು ಮಹದೇವಸ್ವಾಮಿ, ಎಂ.ಸಂತೋಷ್, ಮಹಾಸಭಾ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಸದಸ್ಯರಾದ ಹೆಳವರಹುಂಡಿ ಪ್ರಭು, ಕುರುಬೂರು ಮಂಜುನಾಥ್, ಶಾಮಿಯಾನ ನಾಗೇಶ, ಹೋಟೆಲ್ ಕೀರ್ತಿ, ಮಣಿಕಂಠ, ಯೋಗೇಶ, ಸುನೀಲ, ಮುಖಂಡರಾದ ಬಾಗಳಿ ಯೋಗೇಶ, ಸಿ.ಡಿ.ವೆಂಕಟೇಶ್, ಸಂದೇಶ ಹಾಗೂ ಇನ್ನಿತರರು ಇದ್ದರು.