ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋವಿಡ್-19 ಮಾರ್ಗದರ್ಶನದಂತೆ ಇಂದಿನಿಂದ ಫೆ.3ರವೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಬನ್ನೂರು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ 5ವರ್ಷದೊಳಗಿನ ಮಗುವಿಗೆ ಪೊಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಈಗಾಗಲೇ ಆರೋಗ್ಯ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಪೋಲಿಯೋ ಲಸಿಕೆ ಹಾಕುತ್ತಿದೆ. ಈ ಅಭಿಯಾನಕ್ಕೆ ನಮ್ಮ ಪುರಸಭೆಯ ಸಿಬ್ಬಂದಿಯೂ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ 0-5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಕುಟುಂಬ ಕಲ್ಯಾಣ ಕೇಂದ್ರ, ಔಷಧಾಲಯಗಳು, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು, ಸ್ಥಿರ ಮತ್ತು ಸಂಚಾರಿ ತಂಡಗಳು ನಿರತವಾಗಿವೆ ಎಂದರು.
ಬಸ್ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಕೊಳಚೆ ಪ್ರದೇಶ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ಪೋಲಿಯೋ ಅಭಿಯಾನ ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ರವಿಕುಮಾರ್, ನೇತ್ರ ತಜ್ಞರಾದ ಡಾ.ರಂಗಸ್ವಾಮಿ, ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ನರ್ಸ್ ಇದ್ದರು.