ವಿಜಯಪಥ ಸಮಗ್ರ ಸುದ್ದಿ
ಹಾಸನ: ಕೋವ್ಯಾಕ್ಸಿನ್ ಹಾಕುವ ಸಂಬಂಧ ಯಾವುದೇ ಲೋಪದೋಷಗಳಾಗದಂತೆ ಹೆಚ್ಚಿನ ಜವಾಬ್ದಾರಿ ವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಆರ್. ಸುಧಾಕರ್ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿಯವರು ಲಸಿಕಾ ಕಾರ್ಯಕ್ರಮಕ್ಕೆ ಜ.16 ರಂದು ಚಾಲನೆ ನೀಡಿದ ನಂತರ ಆಯಾಯ ಜಿಲ್ಲೆಗಳಲ್ಲಿ ಕೋವ್ಯಾಕ್ಸಿನ್ ಹಾಕಲು ಕ್ರಮವಹಿಸಲು ತಿಳಿಸಿದರು.
ಕೋವಿಡ್ 19 ಲಸಿಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿ ಎಂದರಲ್ಲದೆ, ಕೋವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಪ್ರಚಾರಕ್ಕೆ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಮೂಲಕ ಪ್ರಚಾರ ನೀಡಬೇಕು ಎಂದು ಡಾ. ಸುಧಾಕರ್ ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ.ಭಾರತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ಮತ್ತು ಹಿಮ್ಸ್ ನಿರ್ದೇಶಕರಾದ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಮೂರ್ತಿ, ಆರ್. ಸಿ.ಎಚ್ ಅಧಿಕಾರಿ ಕಾಂತರಾಜ್ ಹಾಗೂ ಇನ್ನಿತರರು ಇದ್ದರು.