ಬೆಂಗಳೂರು: ಬಿಡದಿಯಲ್ಲಿರುವ ಟೊಯೋಟಾ ಕಂಪನಿ ಕಾರ್ಮಿಕರ ಸಮಸ್ಯೆ ಶೀಘ್ರ ಪರಿಹರಸಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸೂಚಿನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಟೊಯೋಟಾ ಕಂಪನಿ 40 ಕಾರ್ಮಿಕರನ್ನು ಏಕಾಏಕಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಕಂಪನಿಯ ಎದುರು ಒಂದು ವಾರದಿಂದ ಕಾರ್ಮಿಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಆಡಳಿತ ಮಂಡಳಿ ಕಾರ್ಮಿಕರ ಸಮಸ್ಯೆ ಆಲಿಸದೆ ಕಾರ್ಖಾನೆ ಲಾಕ್ಔಟ್ ಮಾಡಿದೆ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವುದಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಂಗಳವಾರ ಸಂಧಾನ ಸಭೆ ಕರೆದಿದ್ದು, ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಮಸ್ಯೆಯನ್ನು ಶೀಘ್ರವೇ ಪರಿಹಾರ ಮಾಡುವ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಕೆಲಸದ ಅವಧಿಯಲ್ಲಿ ತೀರಾ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಎರಡು ಗಂಟೆ ನಿರಂತರ ಕೆಲಸದ ಬಳಿಕ ಕೇವಲ 10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀರು ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಸಮಯವೂ ಸಾಲುವುದಿಲ್ಲ ಎಂದು ಕಾರ್ಮಿಕರು ಸಮಸ್ಯೆ ಹೇಳಿಕೊಂಡಿದ್ದಾರೆ.
ಇನ್ನು ಮಧ್ಯದಲ್ಲಿ ನೀರು ಕುಡಿಯಬೇಕಾದರೂ ವ್ಯವಸ್ಥಾಪಕರಿಂದ ಅನುಮತಿ ಪಡೆಯಬೇಕು. ಅಲ್ಲದೇ ಕೆಲಸದ ಒತ್ತಡ ಹೆಚ್ಚಾಗಿದ್ದು, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಜತೆಗೆ ಊಟದ ಸಮಯ, ಶೌಚಾಲಯಕ್ಕೆ ಹೋದ ಸಮಯವನ್ನು ಲೆಕ್ಕ ಹಾಕಿ ಸಂಬಳಕ್ಕೆ ಕತ್ತರಿ ಹಾಕುತ್ತಿದ್ದಾರೆ. ಕಾರ್ಮಿಕರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ನೌಕರರು ಆರೋಪಿಸಿದ್ದರು.
ಈ ಬಗ್ಗೆ ಮುಖ್ಯಮಂತ್ರಿ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದ್ದು, ಕಂಪನಿಯಲ್ಲಿ ಉಂಟಾಗಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜತೆ ಚರ್ಚಿಸಿ, ಆದಷ್ಟು ಶ್ರೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಬಿಎಸ್ವೈ ತಿಳಿಸಿದ್ದಾರೆ.
ಕಾರ್ಮಿಕರ ಧರಣಿಗೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿ ವಜಾ ಮಾಡಿರುವ 40 ಕಾರ್ಮಿಕರನ್ನು ಮತ್ತೆ ಸೇರಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಆದರೂ ಈ ವರೆಗೂ ಸರ್ಕಾರ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ.