ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಅಟ್ಟಹಾಸದಿಂದ ನಲುಗಿರುವ ಈ ಹೊತ್ತಿನಲ್ಲೇ ಬಿಬಿಎಂಪಿ ಆಯುಕ್ತರ ತಲೆದಂಡವಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಸೂಕ್ತವಾಗಿ ಅಣಿಗೊಳಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಆಯುಕ್ತ ಅನಿಲ್ ಕುಮಾರ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.
ಇದರಿಂದ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಈಗ ಹಿರಿಯ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರಿಗೆ ವಹಿಸಲಾಗಿದೆ.
ಅನಿಲ್ ಕುಮಾರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸರ್ಕಾರದ ಹೆಚ್ಚುವರಿ ಕಾರ್‍ಯದರ್ಶಿಯಾಗಿ ನೆಮಕ ಮಾಡಲಾಗಿದೆ.
ಬಿಬಿಎಂಪಿಯಲ್ಲಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತರಾಗಿದ್ದ ಅನಿಲ್ ಕುಮಾರ್ ನಡುವೆ ಸಮನ್ವಯ ಇರದಿದ್ದುದು ಎಲ್ಲರಿಗೂ ತಿಳಿದ ವಿಚಾರವೇ. ಅಲ್ಲದೇ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದರು ಎಂಬ ಆರೋಪವೂ ಅನಿಲ್ ಕುಮಾರ್ ವಿರುದ್ಧ ಕೇಳಿಬಂದಿತ್ತು.